ವಿಜಯಸಾಕ್ಷಿ ಸುದ್ದಿ, ಹಾವೇರಿ: ಆಧುನಿಕ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಕನಕದಾಸರು ಉತ್ತರ ಕೊಟ್ಟಿದ್ದಾರೆ. ಹೇಗೆ ಸಂಸಾರ ನಡೆಸಬೇಕು, ಹೇಗೆ ಸಾರ್ವಜನಿಕ ಜೀವನದಲ್ಲಿ ಇರಬೇಕು, ಹೇಗೆ ಪರೋಪಕಾರಿ ಜೀವನ ನಡೆಸಬೇಕು ಎಂದು ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಶಿಡೇನೂರ ರಸ್ತೆಯಲ್ಲಿ ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ಕನಕ ಸಮುದಾಯ ಭವನದ ಭೂಮಿ ಪೂಜೆ, ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಶಾಸಕ ಬಸವರಾಜ ಶಿವಣ್ಣವರು ಅವರದೇ ಆದ ವ್ಯಕ್ತಿತ್ವ, ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟವರು. ಎಲ್ಲ ಸಮುದಾಯಗಳೊಂದಿಗೆ ಹೊಂದಿಕೊಂಡು ಹೃದಯ ಶ್ರೀಮಂತಿಯಿಂದ ಕೆಲಸ ಮಾಡುತ್ತಿದ್ದಾರೆ. ನಾವು ಯಾರೂ ಯಾವ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕುವುದಿಲ್ಲ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಆದರೆ, ಬದುಕು ಪ್ರಸ್ತುತ. ಒಂದು ಕಾಲದಲ್ಲಿ ಭೂಮಿ ಇದ್ದವರು ಜಗತ್ತನ್ನು ಆಳುತ್ತಿದ್ದರು. ನಂತರ ದುಡ್ಡಿದ್ದವರು ಜಗತ್ತನ್ನು ಆಳಿದ್ದರು. ಅದಕ್ಕೇ ಬ್ರಿಟಿಷರು ನಮ್ಮನ್ನು ಆಳಿದರು. ಈಗ ಯಾರ ಬಳಿ ಜ್ಞಾನ ಇದೆಯೋ ಅವರು ಜಗತ್ತನ್ನು ಆಳುತ್ತಾರೆ. ಆದ್ದರಿಂದ ಈ ಸಮುದಾಯ ಮುಕ್ತವಾಗಿರುವ, ಪ್ರಾಮಾಣಿಕವಾಗಿರುವ ಸಮುದಾಯ.
ಹಾಲುಮತ ಸಮುದಾಯ ಹಾಲಿನಷ್ಟೇ ಪವಿತ್ರವಾಗಿರುವ ಸಮುದಾಯ. ಈ ಸಮುದಾಯದ ಮಕ್ಕಳು ಜಗತ್ತಿನ ಇತರ ಮಕ್ಕಳ ಜೊತೆ ಪೈಪೋಟಿ ನಡೆಸಬೇಕೆಂದರೆ ಶಿಕ್ಷಣ ಪಡೆಯಬೇಕು. ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ಎಐಗೆ ಬಂದಿದೆ. ಜಗತ್ತಿನ ಆಡಳಿತ, ರಾಜಕೀಯ ಶಕ್ತಿ ಈಗ ಜ್ಞಾನದ ಕಡೆಗೆ ಹೋಗುತ್ತಿದೆ. ಕನಕದಾಸರದು ಅದ್ಭುತವಾದ ಜ್ಞಾನ. ಎಷ್ಟೇ ಪರೀಕ್ಷೆಯಾದರೂ ಅದರಲ್ಲಿ ಗೆದ್ದು ಬಂದವರು ಕನಕದಾಸರು. ಅಂತಹ ಪರಂಪರೆಗೆ ನಾವೆಲ್ಲಾ ಸೇರಿದ್ದೇವೆ ಎನ್ನುವುದು ಹೆಮ್ಮೆ ಪಡುವ ವಿಚಾರ ಎಂದರು.
ಈ ಸಂದರ್ಭದಲ್ಲಿ ಬ್ಯಾಡಗಿ ವಿಧಾನಸಭಾ ಮತಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಎಸ್.ಆರ್. ಪಾಟೀಲ, ಬ್ಯಾಡಗಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಚಿಕ್ಕಪ್ಪ ಹಾದಿಮನಿ, ಉಪಾಧ್ಯಕ್ಷ ಗುಡ್ಡಪ್ಪ ಆಡಿನವರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ನಾನು ಶಿಗ್ಗಾವಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಅದರಲ್ಲಿ ಕನಕದಾಸರ ಕೆಲಸ ಮಾಡಿದ್ದು ನನ್ನ ಪುಣ್ಯಭಾಗ್ಯ. ರಾಜಸ್ಥಾನದಿಂದ ಕನಕದಾಸರ ಮೂರ್ತಿ ತಂದು ಪ್ರತಿಷ್ಠಾಪಿಸಿದ್ದೇನೆ. ಕುರಿಗಾರರಿಗೆ ವಿಶೇಷ ಯೋಜನೆ ಮಾಡಿದ್ದೇನೆ. 265 ಕೋಟಿ ರೂ ವೆಚ್ಚದಲ್ಲಿ ಅಮೃತ ಕುರಿಗಾಹಿ ಯೋಜನೆ ಮಾಡಿದ್ದೇನೆ. ಅದು ಮುಂದುವರೆಯಬೇಕು. ಕುಲಕಸುಬು ಮುಂದುವರೆಯಬೇಕು. ಶಿಕ್ಷಣವನ್ನೂ ಪಡೆಯಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವಿದೆ.
ಬಸವರಾಜ ಬೊಮ್ಮಾಯಿ.
ಸಂಸದರು, ಹಾವೇರಿ-ಗದಗ.