ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಕ್ಕಳ ಶ್ರೇಯಸ್ಸಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಕೆಟ್ಟ ಸಂಪ್ರದಾಯ ಮರೆಯಾಗಬೇಕು ಎಂದು ಹಾಸ್ಯ ಕಲಾವಿದ ಸದಾನಂದ ಕಾಳೆ ಹೇಳಿದರು.
ಅವರು ಶುಕ್ರವಾರ ಲಕ್ಷ್ಮೇಶ್ವರದ ಜಿ.ಎಫ್. ಉಪನಾಳ ಪ್ರತಿಷ್ಠಾನದ ವೃದ್ಧಾಶ್ರಮದಲ್ಲಿ ತಮ್ಮ ಮಗಳು ಅದ್ವಿಕಾಳ ಜನ್ಮ ದಿನಾಚರಣೆ ಅಂಗವಾಗಿ ವೃದ್ಧಾಶ್ರಮದ ಹಿರಿಯರಿಗೆ ಹಾಲು-ಹಣ್ಣು ವಿತರಿಸಿ ಗೌರವಿಸಿದ ಸಂದರ್ಭದಲ್ಲಿ ಮಾತನಾಡಿ, ವಿದ್ಯಾವಂತರೇ ಹೆತ್ತ ತಂದೆ-ತಾಯಿಗಳ ತ್ಯಾಗ, ಶ್ರಮಕ್ಕೆ ಬೆಲೆ ಕೊಡದೇ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ನಮ್ಮ ಸಂಸ್ಕೃತಿ-ಸಂಸ್ಕಾರವಲ್ಲ, ಇದು ನೋವಿನ ಸಂಗತಿಯಾಗಿದೆ. ನಮ್ಮ ಶ್ರೇಯೋಭಿವೃದ್ಧಿಗೆ ಹೆತ್ತವರು, ಹಿರಿಯರು ಪ್ರತಿಯೊಬ್ಬರ ಬಾಳಿನ ಬೆಳಕಾಗಿದ್ದು, ಅವರನ್ನು ಜೋಪಾನ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಅವರ ಹಾರೈಕೆ ಬದುಕಿನ ಅಭಿವೃದ್ಧಿಗೆ ಆಶೀರ್ವಾದವಾಗಿದೆ ಎಂದರು.
ಈ ವೇಳೆ ವೃದ್ಧಾಶ್ರಮದ ಅಧ್ಯಕ್ಷ ಪ್ರಕಾಶ ಉಪನಾಳ, ಉಪಾಧ್ಯಕ್ಷ ದಿಗಂಬರ ಪೂಜಾರ, ಮಲ್ಲು ಕಳಸಾಪುರ, ಮಾಲಿಂಗರಾಯ ಪೂಜಾರ, ಶಿವಲಿಂಗಯ್ಯ ಹೊತಗಿಮಠ, ಸದಾನಂದ ಕಾಳೆ ಕುಟುಂಬವರ್ಗದವರು, ಹಿರಿಯರು ಇದ್ದರು.