HomeGadag Newsಅನ್ನಭಾಗ್ಯ ಅಕ್ಕಿ ಸಾಗಾಟದ ಲಾರಿ, ಟಿಪ್ಪರ್, ರೈತರ ಟ್ರಾಕ್ಟರ್ ಬ್ಯಾಟರಿಗಳ ಕಳ್ಳತನ | ಗ್ರಾಮಸ್ಥರಲ್ಲಿ ಹೆಚ್ಚಿದ...

ಅನ್ನಭಾಗ್ಯ ಅಕ್ಕಿ ಸಾಗಾಟದ ಲಾರಿ, ಟಿಪ್ಪರ್, ರೈತರ ಟ್ರಾಕ್ಟರ್ ಬ್ಯಾಟರಿಗಳ ಕಳ್ಳತನ | ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಹೋಬಳಿಯ ಗ್ರಾಮಗಳಲ್ಲಿ ಕೃಷಿ ಬಳಕೆ ಯಂತ್ರಗಳು, ಪರಿಕರಗಳು, ಜಾನುವಾರು ಕಳ್ಳತನ ಹೆಚ್ಚುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಇದೀಗ ಡಂಬಳ ಗ್ರಾಮದ ಬಿಓಐ ಬ್ಯಾಂಕ್ ಹತ್ತಿರ ನಿಲ್ಲಿಸಿದ್ದ 3 ಅನ್ನಭಾಗ್ಯ ಅಕ್ಕಿ ಸಾಗಾಟ ಲಾರಿಗಳ ಬ್ಯಾಟರಿ, ಒಂದು ಟಿಪ್ಪರ್, ಒಂದು ಟ್ರಾಕ್ಟರ್‌ನ ಬ್ಯಾಟರಿಗಳನ್ನು ರಾತ್ರಿ ಕಳ್ಳತನ ಮಾಡಲಾಗಿದೆ.

ಒಂದೇ ರಾತ್ರಿಯಲ್ಲಿ ಒಟ್ಟೂ 5 ವಾಹನಗಳ ಬ್ಯಾಟರಿ ಕಳ್ಳತನ ಮಾಡಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ವಾಹನ ಚಾಲಕರು ಚಿಂತಿಸುವಂತಾಗಿದೆ. ಸಹಜವಾಗಿ ಲಾರಿ ಚಾಲಕರು ಎರಡು ವಾರದಲ್ಲಿ ಒಂದು ದಿನ ಡಂಬಳ ಗ್ರಾಮದಲ್ಲಿ ಇರುವ ತಮ್ಮ ಮನೆಗೆ ಹೋಗಬೇಕೆನ್ನುವ ಕಾರಣಕ್ಕೆ ತಡರಾತ್ರಿ ಬ್ಯಾಂಕ್ ಮತ್ತು ಬಸ್ ನಿಲ್ದಾಣದ ಸಮೀಪ ಸರಕು ತುಂಬಿರುವ ಲಾರಿಯನ್ನು ನಿಲ್ಲಿಸಿ ಮನೆಗೆ ತೆರಳಿದ್ದರು. ಲಾರಿ ಚಾಲಕರು ಇಲ್ಲದೆ ಇರುವುದನ್ನು ಗಮನಿಸಿದ ಚಾಲಾಕಿ ಕಳ್ಳರು ಬ್ಯಾಟರಿಗಳನ್ನು ಕದ್ದೊಯ್ದಿದ್ದಾರೆ.

ರೈತರು ತಮ್ಮ ಮನೆಯ ಹತ್ತಿರ ಜಾಗದ ಕೊರತೆಯಿಂದ ರಸ್ತೆಯ ಪಕ್ಕ ಮತ್ತು ತಮ್ಮ ಜಮೀನಿನಲ್ಲಿ ಬೆಲೆಬಾಳುವ ಯಂತ್ರಗಳನ್ನು ಬಿಡುತ್ತಾರೆ. ನೀರಾವರಿ ಪೈಪ್‌ಗಳೂ ಹೊಲದಲ್ಲಿರುತ್ತವೆ. ಅಂಥವುಗಳನ್ನು ಕಳ್ಳರು ಸುಲಭವಾಗಿ ಕಳ್ಳತನ ಮಾಡುತ್ತಿದ್ದಾರೆ. ಆದರೆ ಕಳ್ಳರ ಪತ್ತೆಯಾಗದಿರುವುದು ರೈತರಿಗೆ ತಲೆನೋವು ತರಿಸಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಡಂಬಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು, ಇಲ್ಲಿ ಪೊಲೀಸ್ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಿ ರಾತ್ರಿ ಗಸ್ತು ಹಾಕಿಸಬೇಕು. ಗ್ರಾಮದ ಮುಖ್ಯ ಭಾಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ರೈತರು, ಗ್ರಾಮಸ್ಥರು, ಲಾರಿ ಚಾಲಕರು ಆಗ್ರಹಿಸಿದ್ದಾರೆ.

ಡಂಬಳ ಗ್ರಾಮದಲ್ಲಿ ಅನ್ನಭಾಗ್ಯ ಅಕ್ಕಿ ಸಾಗಿಸುವ 3 ಲಾರಿಗಳ ಬ್ಯಾಟರಿ, 1 ರೈತರ ಟ್ರಾಕ್ಟರ್, 1 ಟಿಪ್ಪರ್‌ಗೆ ಅಳವಡಿಸಿರುವ ಬ್ಯಾಟರಿಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರನ್ನು ಪತ್ತೆ ಹಚ್ಚಲು ತಂಡವನ್ನು ರಚನೆ ಮಾಡಿದ್ದು, ಶೀಘ್ರದಲ್ಲಿಯೇ ಕಳ್ಳರನ್ನು ಹಿಡಿಯುತ್ತೇವೆ ಎಂದು ಮುಂಡರಗಿ ಸಿಪಿಐ ವಿಜಯಕುಮಾರ ಪ್ರತಿಕ್ರಿಯಿಸಿದ್ದಾರೆ.

ಕೋಟ್
ಇತ್ತೀಚೆಗೆ ಟ್ರಾಕ್ಟರ್ ಬ್ಯಾಟರಿಯನ್ನು ಹೊಸದಾಗಿ ಖರೀದಿಸಿ ಅಳವಡಿಸಲಾಗಿತ್ತು. ಆದರೆ ರಾತ್ರಿ ಕಳ್ಳತನ ಮಾಡಲಾಗಿದೆ. ಪೊಲೀಸರು ಕಳ್ಳರ ಪತ್ತೆಗೆ ಶೀಘ್ರ ಕ್ರಮ ವಹಿಸಬೇಕು. ನಮ್ಮ ಗ್ರಾಮದಲ್ಲಿ ಬಹಳಷ್ಟು ರೈತರ ಕೃಷಿ ಪರಿಕರ ಕಳ್ಳತನವಾಗುತ್ತಿದೆ. ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗಬೇಕು.

  • ಎಮ್.ಎಸ್. ಯರಾಶಿ.
    ಡಂಬಳ ಗ್ರಾಮದ ರೈತರು.

ಡಂಬಳ ಗ್ರಾಮದಲ್ಲಿ ಲಾರಿಗಳ ಬ್ಯಾಟರಿ ಅಷ್ಟೇ ಅಲ್ಲದೇ ಹೋಬಳಿಯಾದ್ಯಂತ ರಾತ್ರಿಯಾಗುತ್ತಿದ್ದಂತೆ ರೈತರ ಜಮೀನುಗಳಲ್ಲಿ ವಿದ್ಯುತ್ ತೆಗೆಯಲಾಗುತ್ತದೆ. ಇದರಿಂದ ಜಮೀನಿನಲ್ಲಿ ಇಟ್ಟಿರುವ ಬೆಲೆಬಾಳುವ ಕುಂಟೆ-ರಾಟೆ ಬಿತ್ತುವ ಯಂತ್ರಗಳು, ಡ್ರಿಪ್ ಪೈಪ್, ಬೋರ್‌ವೆಲ್‌ಗೆ ಅಳವಡಿಸಿರುವ ವೈರ್ ಕಳ್ಳತನದಿಂದಾಗಿ ರೈತರಲ್ಲಿ ಆತಂಕ ಹೆಚ್ಚಿದೆ. ಕಳ್ಳತನ ತಡೆಯಲು ಸರ್ಕಾರ ತಂಡ ರಚನೆ ಮಾಡುವ ಮೂಲಕ ರೈತರ ಹಿತ ಕಾಪಾಡಬೇಕು.

  • ಕುಮಾರಸ್ವಾಮಿ ಹಿರೇಮಠ.
    ಡಂಬಳ ಗ್ರಾಮದ ರೈತ.



Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!