ನನ್ನ ಮತ್ತು ರಿಷಬ್ ಶೆಟ್ಟಿ ನಡುವೇ ಯಾವುದೇ ಮನಸ್ತಾಪವಿಲ್ಲ. ಜಗಳ ಮಾಡಲು ನಾವು ಸಣ್ಣ ಮಕ್ಕಳಲ್ಲ ಎಂದು ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ 45 ಸಿನಿಮಾದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಚಿತ್ರತಂಡಕ್ಕೆ ಶುಭಹಾರೈಸಿದ್ದರು. ಆ ವೇಳೆ ಮಾತನಾಡುತ್ತಾ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಅವರ ಹೆಸರನ್ನು ಉಲ್ಲೇಖಿಸಿದರೂ, ರಾಜ್ ಬಿ ಶೆಟ್ಟಿ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಇದರಿಂದ ಕಾಂತಾರ ಚಿತ್ರದ ನಂತರ ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ನಡುವೇ ಮನಸ್ತಾಪವಿದೆ ಎಂಬ ವದಂತಿಗಳು ಹರಡಿದ್ದವು.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ ಬಿ ಶೆಟ್ಟಿ, ಅಂತೆಕಂತೆ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. “ರಿಷಬ್ ಶೆಟ್ಟಿ ಮಾತನಾಡುವ ವೇಳೆ ನನ್ನ ಹೆಸರು ಹೇಳಲು ಮರೆತಿರಬಹುದು ಅಷ್ಟೇ. ಸಿನಿಮಾದ ಕುರಿತು ಬೇಕಾದ ವಿಷಯವನ್ನು ಅವರು ಹೇಳಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ. ಇದನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವೇ ಇಲ್ಲ” ಎಂದು ಹೇಳಿದರು.
ಇನ್ನೂ ಕಾಂತಾರದಿಂದ ದೂರ ಉಳಿದ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು, “ಈ ಬಗ್ಗೆ ಈಗಾಗಲೇ ಹಲವು ವೇದಿಕೆಗಳಲ್ಲಿ ಹೇಳಿದ್ದೇನೆ. ಪರ–ವಿರೋಧ ಚರ್ಚೆಗಳು ಹೆಚ್ಚಾದಾಗ, ಯಾರಾದರೂ ಭಾವನೆಗಳಿಗೆ ಅಥವಾ ನಂಬಿಕೆಗೆ ನೋವಾದರೆ ನಾನು ಸ್ವಯಂ ದೂರ ಉಳಿಯುತ್ತೇನೆ. ಕಾಂತಾರ ಹೊರತುಪಡಿಸಿ ಮುಂದೆ ರಿಷಬ್ ಮಾಡುವ ಯಾವುದೇ ಸಿನಿಮಾಗೆ ನನ್ನ ಅಗತ್ಯವಿದ್ದರೆ ನಾನು ಅವರ ಜೊತೆ ಕೆಲಸ ಮಾಡುತ್ತೇನೆ” ಎಂದರು.
“ಮುನಿಸು, ಜಗಳ ಇಟ್ಟುಕೊಂಡರೆ ನಮ್ಮ ಇಂಡಸ್ಟ್ರಿ ಬೆಳೆಯುವುದಿಲ್ಲ. ಇವೆಲ್ಲಾ ಡಿಗ್ರಿಯಲ್ಲೇ ಮುಗಿದ ವಿಚಾರಗಳು. ರಕ್ಷಿತ್, ರಿಷಬ್ ಹಾಗೂ ನಾನು ಮೂವರು ಒಟ್ಟಿಗೆ ನಟಿಸಬೇಕಾದ ಸಮಯ ಬಂದರೆ ಖಂಡಿತ ಒಟ್ಟಾಗಿ ಸಿನಿಮಾ ಮಾಡುತ್ತೇವೆ. ರಿಷಬ್ ಅಥವಾ ರಕ್ಷಿತ್ ನಟಿಸುವಾಗ ನಾನು ಅಭಿನಯಿಸಲ್ಲ ಎಂದು ಹೇಳುವಷ್ಟು ನಾನು ಚಿಕ್ಕ ಮಗು ಅಲ್ಲ” ಎಂದು ರಾಜ್ ಬಿ ಶೆಟ್ಟಿ ಸ್ಪಷ್ಟವಾಗಿ ಹೇಳಿದ್ದಾರೆ.



