ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕೇಂದ್ರ ಸರ್ಕಾರ ನರೇಗಾ ಯೋಜನೆಯ ಕೂಲಿಕಾರರಿಗೆ ಇ-ಕೆವೈಸಿ ಕಡ್ಡಾಯಗೊಳಿಸಿದೆ. ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರರಿಗೆ ಇ-ಕೆವೈಸಿ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ತಾಲ್ಲೂಕಿನ ಎಲ್ಲ ನರೇಗಾ ಕೂಲಿಕಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವಾದ್ದಲ್ಲಿ ನರೇಗಾ ಕೂಲಿಕಾರರ ಉದ್ಯೋಗ ಚೀಟಿ ರದ್ದುಗೊಳಿಸಲಾಗುವುದೆಂದು ತಾ.ಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಹೇಳಿದರು.
ತಾಲೂಕಿನಲ್ಲಿ ಅತೀ ಕಡಿಮೆ ಇ-ಕೆವೈಸಿ ಪ್ರಗತಿ ಸಾಧಿಸಿರುವ ಹಾಲಕೆರೆ ಮತ್ತು ಮಾರನಬಸರಿ ಗ್ರಾ.ಪಂಗಳಿಗೆ ಭೇಟಿ ನೀಡಿ, ನರೇಗಾ ಕೂಲಿಕಾರರ ಮನೆ-ಮನೆಗಳಿಗೆ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಹಾಲಕೆರೆ ಗ್ರಾ.ಪಂಗೆ ಭೇಟಿ ನೀಡಿ ಇ-ಕೆವೈಸಿ ಕಾರ್ಯ ಪರಿಶೀಲಿಸಿದ ಬಸವರಾಜ ಬಡಿಗೇರ ಖುದ್ದು ಗ್ರಾಮದಲ್ಲಿ ಸಂಚರಿಸಿ ಕೂಲಿಕಾರರ ಮನೆಗಳಿಗೆ ಭೇಟಿ ನೀಡಿ ಇ-ಕೆವೈಸಿ ಕಾರ್ಯ ಮಾಡಿದರು. ಈ ವೇಳೆ ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಿದ ಅವರು, ಅಕ್ಟೋಬರ್ 31ರೊಳಗಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಬರುವುದಿಲ್ಲ ಎಂದರು.
ಮಾರನಬಸರಿ ಗ್ರಾ.ಪಂಗೆ ಭೇಟಿ ನೀಡಿ ಇ-ಕೆವೈಸಿ ಮಾಡುತ್ತಿರುವ ಸಿಬ್ಬಂದಿಗಳ ಜೊತೆ ಮಾತನಾಡಿ, ಬೆಳಿಗ್ಗೆ ಮತ್ತು ಸಾಯಂಕಾಲ ಸಂದರ್ಭದಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವುದಿಲ್ಲ. ಈ ವೇಳೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕೂಲಿಕಾರರನ್ನು ಸೇರಿಸಿಕೊಂಡು ಇ-ಕೆವೈಸಿ ಕಾರ್ಯ ಮಾಡಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗಣಕಯಂತ್ರ ನಿರ್ವಾಹಕರು, ನರೇಗಾ ಯೋಜನೆಯ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಎಂಐಎಸ್ ಸಂಯೋಜಕರು, ಬಿಎಫ್‌ಟಿ, ಗ್ರಾಮ ಕಾಯಕ ಮಿತ್ರರು ಹಾಜರಿದ್ದರು.
ಗಜೇಂದ್ರಗಡ ತಾಲ್ಲೂಕಿನಲ್ಲಿ ಒಟ್ಟು 37307 ನರೇಗಾ ಕೂಲಿಕಾರರಿದ್ದು, ಈವರೆಗೂ 18198 ನರೇಗಾ ಕೂಲಿಕಾರರ ಇ-ಕೆವೈಸಿ ಕಾರ್ಯ ಪೂರ್ಣಗೊಂಡಿದೆ. ಇನ್ನೂ 19109 ನರೇಗಾ ಕೂಲಿಕಾರರ ಇ-ಕೆವೈಸಿ ಕಾರ್ಯ ಉಳಿದುಕೊಂಡಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಮುಕ್ತಾಯಗೊಳಿಸುವಂತೆ ಸಂಬಂಧಿಸಿದ ಸಿಬ್ಬಂದಿಗಳಿಗೆ ವರ್ಚುವಲ್ ಸಭೆ ಮೂಲಕ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ತಾಕೀತು ಮಾಡಿದ್ದಾರೆ.



