ವಿಜಯಸಾಕ್ಷಿ ಸುದ್ದಿ, ಗದಗ : ಚುನಾವಣಾ ಸಂದರ್ಭದಲ್ಲಿ ಪ್ರತಿ ಮನೆ ಮನೆಗೆ ಗ್ಯಾರಂಟಿ ಕಾರ್ಡುಗಳನ್ನು ನೀಡಲಾಗಿತ್ತು. ಚುನಾವಣಾ ನಂತರ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಚುನಾವಣಾ ಪೂರ್ವ ನೀಡಿದ ಗ್ಯಾರಂಟಿ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಲಕ್ಷ್ಮೇಶ್ವರ ರಸ್ತೆಯ ಮುಳಗುಂದದ ಆರ್.ಎನ್. ದೇಶಪಾಂಡೆ ಅವರ ಜಮೀನಿನಲ್ಲಿ ಬುಧವಾರ ಏರ್ಪಡಿಸಿದ್ದ ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿಗಳ ಅನುಷ್ಠಾನದಲ್ಲಿ ದಲ್ಲಾಳಿಗಳ ಹಾವಳಿಗೆ ನಮ್ಮ ಸರ್ಕಾರ ಸಂಪೂರ್ಣ ಕಡಿವಾಣ ಹಾಕಿದೆ. ಪಾರದರ್ಶಕ ಆಡಳಿತ ನೀಡುವ ಮೂಲಕ ಬಡವರ, ದೀನ-ದಲಿತರ ಪರವಾಗಿ ಹಗಲಿರುಳು ಕೆಲಸ ಮಾಡುತ್ತಿದೆ. ಬಡವರ ಸರ್ಕಾರಕ್ಕೆ ಜನಾಶೀರ್ವಾದ ನಿರಂತರವಾಗಿ ಇರಲೆಂದು ಕೋರಿದರು.
ಗದಗ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯನ್ನು ಶೇ.93ರಷ್ಟು ಜಾರಿಗೊಳಿಸಲಾಗಿದೆ. 2.18 ಲಕ್ಷ ಕಾರ್ಡುಗಳಿದ್ದು 7.84 ಲಕ್ಷ ಕುಟುಂಬ ಸದಸ್ಯರಿಗೆ ಪ್ರತಿ ತಿಂಗಳು 11.96 ಕೋಟಿ ಮೊತ್ತವನ್ನು ನೇರವಾಗಿ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಲಕ್ಷ್ಮೇಶ್ವರ ಯೋಜನೆಯಡಿ ಜಿಲ್ಲೆಯಲ್ಲಿ ಶೇ. 99.16ರಷ್ಟು ಗುರಿ ಸಾಧನೆಯಾಗಿದೆ. 2.20 ಲಕ್ಷ ಫಲಾನುಭವಿಗಳಿಗೆ ಎರಡು ಸಾವಿರ ರೂ.ಗಳಂತೆ ಪ್ರತಿ ತಿಂಗಳಿಗೆ 44 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ.
ಗೃಹಜ್ಯೋತಿಯಡಿ ಶೇ.100ರಷ್ಟು ಗುರಿ ಸಾಧನೆಯಾಗಿದೆ. ಯುವ ನಿಧಿಯಡಿ ಜಿಲ್ಲೆಯ 259 ಫಲಾನುಭವಿಗಳಿಗೆ ಹಣ ಪಾವತಿ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಜೂನ್ 11ರಿಂದ ಈವರೆಗೆ ಜಿಲ್ಲೆಯಲ್ಲಿ 3.72 ಕೋಟಿ ಮಹಿಳಾ ಪ್ರಯಾಣಿಕರು ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.
ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್. ಪಾಟೀಲ ಮಾತನಾಡಿ, ಬೆಲೆ ಏರಿಕೆಯಿಂದ ಬಸವಳಿದ ಜನಸಾಮಾನ್ಯರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಚುನಾವಣಾ ಪೂರ್ವ ನೀಡಿದ ಭರವಸೆಗಳಾದ ಪಂಚ ಗ್ಯಾರಂಟಿ ಅನುಷ್ಠಾನ ಮಾಡುವ ಮೂಲಕ ಬಡವರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹಾಗೂ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳ ನಿರಂತರ ಶ್ರಮದಿಂದ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಯೋಜನೆಗಳ ಅನುಷ್ಠಾನದಲ್ಲಿ ಕಾರ್ಯಕರ್ತರ ಶ್ರಮವೂ ಅಡಗಿದ್ದು, ಎಲ್ಲರಿಗೂ ಅಭಿನಂದನೆಗಳು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಗದಗ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ ಸೇರಿದಂತೆ ಗಣ್ಯರಾದ ಎಸ್.ಎನ್. ನೀಲಗುಂದ, ಎಂ.ಟಿ. ಬಟ್ಟೂರ, ಬಸವರಾಜ ಕಡೆಮನಿ, ನೀಲವ್ವ ಬೋಳೆಣ್ಣವರ, ಹನುಮಂತಪ್ಪ ಪೂಜಾರ, ಶಕುಂತಲಾ ಅಕ್ಕಿ, ಶ್ರೀನಿವಾಸ ಹುಯಿಲಗೋಳ, ಮಹಾಂತೇಶ, ಉಮಾ ಮಟ್ಟಿ, ನಾಗರಾಜ ದೇಶಪಾಂಡೆ, ಮಲ್ಲಪ್ಪ ಚವ್ಹಾಣ, ವಿಜಯಕುಮಾರ್ ನೀಲಗುಂದ, ಅನುಸೂಯಾ, ಕಲ್ಲನಗೌಡ ಕರಿಗೌಡ, ಕುರ್ಷಿನಾ ಕಲ್ಲನಗೌಡ್ರ, ಬಸವಂತಪ್ಪ ಹಾರೋಗೇರಿ, ಇಮಾಮಸಾಬ ಶೇಖ್, ಮಹಾದೇವಪ್ಪ ಗಡಾದ, ಲಕ್ಷ್ಮವ್ವ ಕುಂದಗೋಳ, ಚಂಪವ್ವ ಗುಳೇದ, ನೀಲವ್ವ ಅಸುಂಡಿ, ಯಲ್ಲವ್ವ ಕವಲೂರ, ಎಸ್.ಎನ್. ಬಳ್ಳಾರಿ, ಅಜ್ಜಪ್ಪ ಉಗ್ಗಣ್ಣವರ, ಲಕ್ಷ್ಮಿ ಅನಿಲ ಸಿದ್ಧನಹಳ್ಳಿ, ಪರವೀನಬಾನು ಮುಲ್ಲಾ, ಬಾಶಾ ಮಲ್ಲಸಮುದ್ರ, ಕೃಷ್ಣಗೌಡ ಪಾಟೀಲ, ಮಲ್ಲಪ್ಪ ಬಾರಕೇರ, ಮಲ್ಲಪ್ಪ ಚಿಂಚಲಿ, ದೇವರಡ್ಡಿ ತಿರ್ಲಾಪುರ, ರಮೇಶ ಹೊನ್ನಿಕಾಯಕರ, ಸಂಗಮೇಶ ಹಾದಿಮನಿ, ಸಂಗು ಕೆರಗಲ ಮಟ್ಟಿ, ಸಾವಿತ್ರಿ ಹೂಗಾರ, ದಯಾನಂದ ಪವಾರ, ಶಂಭು ಕಾಳೆ, ಮೀನಾಕ್ಷಿ ಬಳೆಣ್ಣವರ, ಸೇರಿದಂತೆ ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹಿರಾಲಾಲ ಜಿನಗಿ ಹಾಗೂ ವಿವಿಧ ತಾಲೂಕಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಗದಗ ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯ ಶೇ. 92.96ರಷ್ಟು, ಗೃಹಲಕ್ಷ್ಮಿ ಶೇ. 90.33ರಷ್ಟು, ಗೃಹಜ್ಯೋತಿ ಶೇ. 99.11 ಗುರಿ ಸಾಧನೆಯಾಗಿದೆ. ಶಕ್ತಿ ಯೋಜನೆಯಡಿ 1.14 ಕೋಟಿ ಮಹಿಳೆಯರು ತಮ್ಮ ಪ್ರಯಾಣ ಮಾಡುವ ಮೂಲಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆದಿದ್ದಾರೆ. ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪಂಚಗ್ಯಾರಂಟಿ ಯೋಜನೆಗಳನ್ನು ನಿರಂತರವಾಗಿ ಮುನ್ನಡೆಸಲಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ 58 ಸಾವಿರ ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸಿದೆ ಎಂದು ಸಚಿವ ಎಚ್.ಕೆ. ಪಾಟೀಲ ವಿವರಿಸಿದರು.
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅಭಿವೃದ್ಧಿಯ ಪ್ರಗತಿ ಪರ್ವ ನಿರಂತರವಾಗಿ ಮುನ್ನಡೆದಿದೆ. ಬಡವರ ಆರ್ಥಿಕತೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಪಂಚ ಗ್ಯಾರಂಟಿಗಳು ಕ್ರಾಂತಿಕಾರಕ ಹೆಜ್ಜೆಯನ್ನಿರಿಸಿವೆ. ರಾಜ್ಯದ 1.10 ಕೋಟಿ ಜನರನ್ನು ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡತನದಿಂದ ಮೇಲೆ ತರಲಾಗಿದೆ. ಪಂಚ ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 5 ಸಾವಿರ ರೂ.ಗಳ ಆರ್ಥಿಕ ಅನುಕೂಲವಾಗಲಿದೆ. ವರ್ಷಕ್ಕೆ 60 ಸಾವಿರ ರೂ. ಪ್ರತಿ ಕುಟುಂಬಕ್ಕೆ ಗ್ಯಾರಂಟಿಗಳ ಅನುಷ್ಠಾನದಿಂದ ಅನುಕೂಲವಾಗಲಿದೆ. ಜಗತ್ತಿನಲ್ಲಿಯೇ ಗ್ಯಾರಂಟಿ ಯೋಜನೆಗಳಂತಹ ಕಾರ್ಯಕ್ರಮಗಳನ್ನು ಎಲ್ಲಿಯೂ ಕಾಣಲಾಗದು.
– ಎಚ್.ಕೆ. ಪಾಟೀಲ.
ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವರು.