ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ರಾಜ್ಯ ಸರ್ಕಾರ ಆರ್ಥಿಕ ದುಸ್ಥಿತಿಯಲ್ಲಿದೆ. ಅದನ್ನು ಮುಚ್ಚಿಕೊಳ್ಳಲು ಬಿಜೆಪಿ ಸಂಸದರ ವಿರುದ್ಧ ಆರೋಪ ಮಾಡುತ್ತಿದೆ. ಆರ್‌ಎಸ್‌ಎಸ್ ವಿರುದ್ಧವೂ ರಾಜ್ಯ ಸರ್ಕಾರ ಮೂಲ ಸಂವಿಧಾನದ ವಿರುದ್ಧ ಆದೇಶ ಮಾಡಿದ್ದು, ಇದು ಕೋರ್ಟ್ನಲ್ಲಿ ನಿಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಾವು ಆರ್‌ಎಸ್‌ಎಸ್ ಕಾರ್ಯಕ್ರಮದಿಂದ ದೂರ ಉಳಿಯುವ ಪ್ರಶ್ನೆಯೇ ಇಲ್ಲ. ಯಾರು ಪಥ ಸಂಚಲನ ಕಾರ್ಯಕ್ರಮ ಮಾಡುತ್ತಾರೋ ಅವರಿಗೆ ಅವಕಾಶ ಇದೆ. ಬೇರೆ ಸಂಘಟನೆಗಳು ಪಥ ಸಂಚಲನ ಮಾಡುವುದಿದ್ದರೆ ಮಾಡಲಿ. ಇದು ದೊಡ್ಡ ದೇಶ, ಇಲ್ಲಿ ಎಲ್ಲ ಸಂಘಟನೆಗೆ ಅವಕಾಶ ನೀಡಬೇಕು. ಪಥ ಸಂಚಲನಕ್ಕೆ ಅವಕಾಶ ಕೊಡುವ ವಿಚಾರದಲ್ಲಿ ಕೋರ್ಟ್ ಸರಿಯಾದ ತೀರ್ಮಾನ ಮಾಡಿದೆ. ಸರ್ಕಾರದ ಆದೇಶದಿಂದ ಗೊಂದಲ ಉಂಟಾಗಿದೆ,” ಎಂದು ಹೇಳಿದರು.
ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ದೊಣ್ಣೆಗಳನ್ನು ಬಳಸುವ ಬಗ್ಗೆ ಸಚಿವರು ಆಕ್ಷೇಪ ಎತ್ತುತ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಪಥ ಸಂಚಲನದಲ್ಲಿ ಯಾರಿಗೂ ತೊಂದರೆಯಾಗಿದೆಯಾ? ಸರ್ಕಾರ ಸಮಾಜದಲ್ಲಿ ಕ್ಷೋಭೆ ಉಂಟುಮಾಡುವ ಕೆಲಸ ಮಾಡುತ್ತಿದೆ. ಇಷ್ಟು ವರ್ಷಗಳಿಂದ ಸಂಘ ಪಥ ಸಂಚಲನ ಮಾಡುತ್ತಿದೆ. ಜಗತ್ತಿನಲ್ಲಿ ಎಲ್ಲರಿಗೂ ಅವರದೇ ಆದ ನಂಬಿಕೆಗಳಿವೆ. ಸರ್ಕಾರ ಅವುಗಳಿಗೆ ಧಕ್ಕೆ ತರುವ ಕೆಲಸ ಮಾಡುವುದು ಸರಿಯಲ್ಲ. ಸರ್ಕಾರದ ಎದುರಿನ ಸಮಸ್ಯೆಗಳಿಗೆ ಪರಿಹಾರ ಕೊಡುವುದನ್ನು ಬಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ,” ಎಂದು ಆರೋಪಿಸಿದರು.
ಬಿಜೆಪಿ ಸಂಸದರ ಕುರಿತು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಅವರು ಹೇಳಿದರು, “ರಾಜ್ಯ ಸರ್ಕಾರ ಆರ್ಥಿಕ ದುಸ್ಥಿತಿಯಲ್ಲಿದೆ. ಅದನ್ನು ಮುಚ್ಚಿಕೊಳ್ಳಲು ಆರೋಪ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬರುವಷ್ಟು ಹಣ ಬಂದಿದೆ. ರಾಜ್ಯದ ರೈಲ್ವೆ ಯೋಜನೆಗಳಿಗೆ ಯುಪಿಎ ಅವಧಿಯಲ್ಲಿ 5,000 ಕೋಟಿ ರೂ. ಘೋಷಣೆ ಆಗಿತ್ತು. ಬಿಡುಗಡೆಯಾಗಲಿಲ್ಲ. ನಮ್ಮ ಅವಧಿಯಲ್ಲಿ ಪ್ರತಿ ವರ್ಷ ಅದಕ್ಕಿಂತ ಹೆಚ್ಚು ಹಣ ರಾಜ್ಯಕ್ಕೆ ಬಂದಿದೆ. ರಾಜ್ಯ ಸರ್ಕಾರ ತಮ್ಮ ಲೋಪ ಮುಚ್ಚಿಕೊಳ್ಳಲು ಎಂಪಿಗಳ ವಿರುದ್ಧ ಆರೋಪ ಮಾಡುತ್ತಿದೆ,” ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅವರ ಹೇಳಿಕೆ ಕುರಿತು ಸಿಎಂ ತಮ್ಮದೇ ಆದ ಸ್ಪಷ್ಟೀಕರಣ ನೀಡಿದ್ದಾರೆ. “ಕಾಂಗ್ರೆಸ್ ಹೈಕಮಾಂಡ್ ಅಂತಿಮ ಅಂತಿದ್ದರು. ಯತೀಂದ್ರ ಹೇಳಿಕೆ ನೋಡಿದಾಗ ಹೈಕಮಾಂಡ್ ಎಲ್ಲಿದೆ ಅನ್ನುವ ಪ್ರಶ್ನೆ ಕಾಂಗ್ರೆಸ್‌ನಲ್ಲಿಯೇ ಉಂಟಾಗಿದೆ. ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿದೆಯಾ, ಸಿಎಂ ಕುಟುಂಬದವರ ಸುತ್ತ ಇದೆಯಾ ಎನ್ನುವ ಪ್ರಶ್ನೆ ಕಾಂಗ್ರೆಸ್‌ನಲ್ಲಿಯೇ ಮೂಡುತ್ತಿದೆ,” ಎಂದು ಹೇಳಿದರು.



