ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನಲ್ಲಿ ರೇಶನ್ ಕಾರ್ಡ್ಗೆ ಅರ್ಹರಿರುವ ಫಲಾನುಭವಿಗಳ ಸರ್ವೆ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಜಂಟಿಯಾಗಿ ನಡೆಸುವಂತೆ ತಾಲೂಕಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ವಿಸಿ ಹಾಲ್‌ನಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆ ಲಭಿಸುವಲ್ಲಿ ಫಲಾನುಭವಿಗಳಿಗೆ ಅಡಚಣೆಗಳು ಉಂಟಾದರೆ ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಆದ್ದರಿಂದ ಪ್ರತಿ ಮೂರು ಪಂಚಾಯಿತಿ ಸೇರಿಸಿ ಜನಸ್ಪಂದನ ಸಭೆ ಮಾಡಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಜಿಲ್ಲೆಯ ವಿವಿಧ ಬಸ್ ನಿಲ್ದಾಣಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯ ಸೇರಿದಂತೆ ಸ್ವಚ್ಛತೆಯ ಕುರಿತು ನಿಗಾ ವಹಿಸಬೇಕು ಎಂದು ಸೂಚಿಸಿದರು.
ಗೃಹಲಕ್ಷ್ಮೀ ಯೋಜನೆಯಡಿ ಜೂನ್ 2025ರವರೆಗೆ ಗದಗ ತಾಲೂಕಿನಲ್ಲಿ ಯಜಮಾನಿ ಹೆಸರಿನಲ್ಲಿ ಒಟ್ಟು 81959 ಜನರು ಪಡಿತರ ಹೊಂದಿದ್ದಾರೆ. 80911 ಅರ್ಜಿಗಳು ನೋಂದಣಿಯಾಗಿದ್ದು, ಅದರಲ್ಲಿ 80447 ಅರ್ಜಿಗಳಿಗೆ ಮಂಜೂರಾತಿ ದೊರೆತು ಶೇ. 99.42ರಷ್ಟು ಪ್ರಗತಿ ಸಾಧಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಗದಗ-ಬೆಟಗೇರಿಯಲ್ಲಿ (ಐಆರ್‌ಎ) ಆಗಸ್ಟ್ 2025ರ ಮಾಹೆಯಲ್ಲಿ ರಾಜ್ಯ ಸರಕಾರಿ ಅನ್ನಭಾಗ್ಯ ಹಂಚಿಕೆ ಯೋಜನೆಯಡಿ ಒಟ್ಟು 33558 ಪಡಿತರ ಕಾರ್ಡುಗಳಿದ್ದು (ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ಗಳು) 5536.05 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ಆಗಸ್ಟ್ 2025 ಮಾಹೆಯಲ್ಲಿ (ಕೇಂದ್ರ ಸರ್ಕಾರ) ಎನ್‌ಎಫ್‌ಎಸ್‌ಎ ಅಕ್ಕಿ ಹಂಚಿಕೆಯಡಿ ಒಟ್ಟು 33558 ಕಾರ್ಡ್ಗಳಿದ್ದು (ಅಂತ್ಯೋದಯ ಮತ್ತು ಬಿಪಿಎಲ್) 2326.76 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ಗೃಹಜ್ಯೋತಿ ಯೋಜನೆಯಡಿ 31-8-2025ರವರೆಗೆ ಗದಗ ಶಹರ ಉಪವಿಭಾಗದಲ್ಲಿ 46482 ಸ್ಥಾವರಗಳು ಅರ್ಹವಾಗಿದ್ದು, 46267 ಸ್ಥಾವರಗಳ ನೋಂದಣಿಯೊಂದಿಗೆ ಶೇ. 99.54 ಪ್ರಗತಿಯಾಗಿದೆ.
31-8-2025ರವರೆಗೆ ಗೃಹಜ್ಯೋತಿ ಯೋಜನೆಯಡಿ ಗದಗ ಗ್ರಾಮೀಣ ಉಪವಿಭಾಗದಲ್ಲಿ 53268 ಸ್ಥಾವರಗಳು ಅರ್ಹವಾಗಿದ್ದು, 53070 ಸ್ಥಾವರಗಳ ನೋಂದಣಿಯಾಗಿ ಶೇ. 99.63 ಪ್ರಗತಿಯಾಗಿದೆ.
ಯುವನಿಧಿ ಯೋಜನೆಯಡಿ ಗದಗ ತಾಲೂಕಿನಲ್ಲಿ 31-8-2025ರವರೆಗೆ 2231 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 1761 ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಹಣ ವರ್ಗಾವಣೆಯಾಗಿದೆ ಎಂದು ಸಂಬಂಧಿತ ಅಧಿಕಾರಿಗಳು ಮಾಹಿತಿ ಒದಗಿಸಿದರು.
ಸಭೆಗೂ ಮುನ್ನ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನದ ಪ್ರಸ್ತಾವನೆಯನ್ನು ಜಿಲ್ಲಾ ಸಮಿತಿ ಸದಸ್ಯ ಶರೀಫ್ ಬೆಳೆಯಲಿ ಬೋಧಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಉಪಾಧ್ಯಕ್ಷೆ ನಿಲಮ್ಮ ಬೋಳನವರ, ಸದಸ್ಯರುಗಳಾದ ಈರಣ್ಣ ಹುನಸಿಕಟ್ಟಿ, ಶರೀಫ್ ಬೆಳೆಯಲಿ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ದಯಾನಂದ ಪವಾರ, ಶಂಭು ಕಾಳೆ, ಸಾವಿತ್ರಿ ಹೂಗಾರ, ಸಂಗು ಕೆರಕಲಕಟ್ಟಿ, ಎನ್.ಬಿ. ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿಕಾಯ್ಕರ, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ ಚಿಂಚಲಿ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಬಾರಕೇರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೆ ಹಾಗೂ ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿತ ಅಧಿಕಾರಿಗಳು ಹಾಜರಿದ್ದರು.
ರಾಜ್ಯ ಸರ್ಕಾರದಿಂದ ಜಾರಿಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು, ಈ ಯೋಜನೆಗಳ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವಲ್ಲಿ ವಿಳಂಬವಾಗಬಾರದು. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಲು ಸಂಬಂಧಿತ ಅಧಿಕಾರಿಗಳು ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು. ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಪ್ರಾಮಾಣಿಕತನವಿರಬೇಕು ಎಂದು ಅಶೋಕ ಮಂದಾಲಿ ತಿಳಿಸಿದರು.


