ಬೆಳಗಾವಿ: ಈ ಕಾವಿಧಾರಿಗಳು ಮಠಾಧೀಶರು, ಬಸವ ತಾಲಿಬಾನಿಗಳು ಎಂದು ಕೊಲ್ಲಾಪುರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಭಜರಂಗದಳ ಆಯೋಜಿಸಿದ್ದ ಹನುಮ ಮಾಲಾ ಧೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಈ ಮಾಲೆ ಪೊಲೀಸ್ ಇದ್ದಹಾಗೆ, ನಮ್ಮನ್ನು ಕೆಟ್ಟ ಕೆಲಸ ಮಾಡಲು ಬಿಡುವುದಿಲ್ಲ. ಏನಾದ್ರೂ ತಪ್ಪು ಕೆಲಸ ಮಾಡಲು ಹೊರಟ್ರೆ, ಅದು ನಮ್ಮನ್ನು ತಡೆಯುತ್ತೆ. ನಮ್ಮಲ್ಲಿ ಪಂಡರಾಪುರಕ್ಕೆ ಹೋಗುವವರು ಮಾಲೆ ಹಾಕಿಕೊಳ್ಳುತ್ತಾರೆ. ಯಾರಾದ್ರೂ ಮದ್ಯದಂಗಡಿ ಕಡೆ ಹೊರಟ್ರೆ, ಕೊರಳಿನಲ್ಲಿರುವ ಪೊಲೀಸ್ ನಮ್ಮನ್ನು ತಡೆಯುತ್ತೆ.
ಮತ್ತೆ ಯಾರಾದ್ರೂ ಅಡ್ಡೆಗೆ ಹೊರಟಿದ್ರೆ, ನಾನು ಕೊರಳಲ್ಲಿ ಇದ್ದೇನೆ. ಬಾ ಈ ಕಡೆ ಎಂದು ಕರೆಯುತ್ತೆ. ಈ ಮಾಲೆ ಮಾತನಾಡುವುದಿಲ್ಲ. ಹನುಮ ಮಾಲೆಯ ಕುರಿತು ಕೆಲವರು ಟೀಕೆ ಮಾಡಬಹುದು. ಕಮ್ಯುನಿಸ್ಟರು ಹಾಗೂ ನಮ್ಮಂಥ ಕಾವಿ ಬಟ್ಟೆ ಧರಿಸಿರುವ ಬಸವ ತಾಲಿಬಾನಿಗಳು ಮಾಲೆ ಬಗ್ಗೆ ಟೀಕೆ ಮಾಡಬಹುದು ಎಂದು ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಿವಾದಾತ್ಮಕ ಪದ ಬಳಕೆ ಮಾಡಿದ್ದಾರೆ.



