‘ಲವ್ ಇನ್ಶೂರೆನ್ಸ್ ಕಂಪನಿ’ ಚಿತ್ರದ ಸೋಲಿನ ಬಗ್ಗೆ ನಿರ್ದೇಶಕ ವಿಘ್ನೇಶ್ ಶಿವನ್ ಮಾಡಿರುವ ಹೇಳಿಕೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಮುಗ್ಗರಿಸಲು ನೆಗೆಟಿವ್ ವಿಮರ್ಶೆಗಳು ಮತ್ತು ಸಂಘಟಿತ ಆನ್‌ಲೈನ್ ಪ್ರಚಾರವೇ ಕಾರಣ ಎಂದು ಅವರು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
190 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಕೇವಲ 66 ಕೋಟಿ ರೂ. ಗಳಿಕೆ ಮಾಡಿ ದೊಡ್ಡ ಆರ್ಥಿಕ ಹೊಡೆತ ಅನುಭವಿಸಿತ್ತು. ಆದರೆ ಒಟಿಟಿಯಲ್ಲಿ ಚಿತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿರುವ ವಿಘ್ನೇಶ್, “ಚಿತ್ರರಂಗದೊಳಗಿನಿಂದಲೇ ಬೆಂಬಲ ಸಿಗದಿದ್ದರೆ ಸಾರ್ವಜನಿಕ ಅಭಿಪ್ರಾಯವೂ ಬದಲಾಗುತ್ತದೆ. ಅದು ಚಿತ್ರದ ಭವಿಷ್ಯವನ್ನು ನಿರ್ಧರಿಸುತ್ತದೆ” ಎಂದು ಹೇಳಿದ್ದಾರೆ.
“ಮೊದಲ ವಾರಾಂತ್ಯದಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಆದರೆ ನಂತರ ದಿಢೀರ್ ನೆಗೆಟಿವ್ ಟ್ರೆಂಡ್ ಹುಟ್ಟುಹಾಕಲಾಯಿತು. ಆ ಆಘಾತದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಆದರೆ ವಿಘ್ನೇಶ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. “ಜನರು ಹಣ ಕೊಟ್ಟು ಸಿನಿಮಾ ನೋಡುತ್ತಾರೆ. ಸಿನಿಮಾ ಇಷ್ಟವಾಗದಿದ್ದರೆ ಅಭಿಪ್ರಾಯ ಹೇಳುವ ಹಕ್ಕು ಅವರಿಗಿದೆ” ಎಂದು ಅನೇಕರು ಪ್ರತಿಕ್ರಿಯಿಸಿದ್ದು, ಚಿತ್ರದ ಸೋಲಿಗೆ ವಿಮರ್ಶಕರನ್ನು ಮಾತ್ರ ಹೊಣೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.



