‘ಪೆದ್ದಿ’ ಸಿನಿಮಾ ಬಿಡುಗಡೆಗೂ ಮುನ್ನ ರಾಮ್ ಚರಣ್ ಅವರ ಪ್ರತಿಯೊಂದು ಸಾರ್ವಜನಿಕ ಕಾರ್ಯಕ್ರಮದಲ್ಲೂ ಮತ್ತೊಬ್ಬ ವ್ಯಕ್ತಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಎತ್ತರದ ದೇಹ, ಕಪ್ಪು ಸೂಟ್, ಕಠಿಣ ಭದ್ರತೆ ಹಾಗೂ ಸ್ಟೈಲಿಶ್ ಹಾಜರಾತಿಯಿಂದ ವೈರಲ್ ಆಗಿರುವ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಅಂತರರಾಷ್ಟ್ರೀಯ MMA ಫೈಟರ್ ಕೆವಿನ್ ಕುಂಟಾ.
ಗಾಂಬಿಯಾ ಮೂಲದ ಕೆವಿನ್ ಸದ್ಯ ಇಟಲಿಯಲ್ಲಿ ನೆಲೆಸಿದ್ದು, ವೃತ್ತಿಪರ ಫೈಟರ್ ಆಗಿ ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ದೈಹಿಕ ಸಾಮರ್ಥ್ಯ ಮತ್ತು ಭದ್ರತಾ ಕೌಶಲ್ಯಗಳಿಂದ ಗುರುತಿಸಿಕೊಂಡಿರುವ ಅವರನ್ನು ‘ಪೆದ್ದಿ’ ಚಿತ್ರದ ಪ್ರಚಾರ ಅಭಿಯಾನಕ್ಕಾಗಿ ರಾಮ್ ಚರಣ್ ತಂಡ ವಿಶೇಷವಾಗಿ ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ.
ಚಿತ್ರರಂಗದ ವಲಯಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಕೆವಿನ್ ಅವರಿಗೆ ದಿನಕ್ಕೆ 2 ಲಕ್ಷದಿಂದ 4 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಈ ಮೊತ್ತವೇ ಈಗ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ರಾಮ್ ಚರಣ್ ಎಲ್ಲೇ ತೆರಳಿದರೂ ಕೆವಿನ್ ಅವರ ಸುತ್ತ ಭದ್ರತಾ ವಲಯ ನಿರ್ಮಿಸುತ್ತಾರೆ. ಅಭಿಮಾನಿಗಳ ಗುಂಪು, ಮಾಧ್ಯಮಗಳ ದಟ್ಟಣೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ನಡುವೆಯೂ ನಟನಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ.
ಇನ್ನೊಂದೆಡೆ, ‘ಪೆದ್ದಿ’ ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ಹಾಗೂ ಭಾರಿ ತಾರಾಗಣದೊಂದಿಗೆ ನಿರ್ಮಾಣವಾಗಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಜೂನ್ 4ರಂದು ಪ್ರೇಕ್ಷಕರ ಮುಂದೆ ಬರಲಿದೆ. ‘ಪೆದ್ದಿ’ ಚಿತ್ರದ ಪ್ರಚಾರದಷ್ಟೇ ರಾಮ್ ಚರಣ್ ಅವರ ಬಾಡಿಗಾರ್ಡ್ ಕೆವಿನ್ ಕುಂಟಾ ಕೂಡ ಈಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.



