ಮಡಿಕೇರಿ: ಕೊಡಗು ಜಿಲ್ಲೆಯ ಮಾಲ್ದಾರೆ ಲಿಂಗಾಪುರ ಚೆಕ್ ಪೋಸ್ಟ್‌ನಲ್ಲಿ ಕಾರಿನಲ್ಲಿ ಶವ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಾಲ್ದಾರೆ ಚೆಕ್‌ಪೋಸ್ಟ್‌ನಲ್ಲಿ ನಡೆದ ಪರಿಶೀಲನೆ ವೇಳೆ, ಕಾರಿನಲ್ಲಿ ಮಹಿಳೆಯ ಶವ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ದೂರು ಬಂದಿತ್ತು. ದೂರಿನ ಆಧಾರದ ಮೇಲೆ ವಿಚಾರಣೆ ಕೈಗೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇನ್ನೂ ಮೃತ ಮಹಿಳೆಯನ್ನು ನಾಂಕಿ ದೇವಿ (45) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಮೈಸೂರಿನಲ್ಲಿ ಕುಟುಂಬ ಕಲಹದ ಹಿನ್ನಲೆಯಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ, ಹಾಗೂ ಕೊಡಗಿನ ಕಾಡಿನಲ್ಲಿ ಶವವನ್ನು ಬಿಸಾಡಲು ಹೋಗುತ್ತಿದ್ದರು ಎಂದು ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದರೂ, ಹೆಚ್ಚಿನ ತನಿಖೆಗಾಗಿ ಮೈಸೂರಿಗೆ ವರ್ಗಾಯಿಸಲಾಗಿದೆ. ಮುಂದಿನ ತನಿಖೆಯಲ್ಲಿ ಮಹಿಳೆಯ ಮೃತ್ಯುವಿನ ಹಿಂದಿನ ಕಾರಣಗಳು ಹಾಗೂ ಬಂಧಿತರ ಪಾತ್ರ ಸ್ಪಷ್ಟವಾಗಲಿದೆ.


