ವಿಜಯನಗರ: ಸರ್ಕಾರದ ಸಬ್ಸಿಡಿ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕು.ಪ್ರಿಯಾಂಕ ಜೈನ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಪ್ರಿಯಾಂಕ ಜೈನ್(33), ಸಂಘದ ಫೀಲ್ಡ್ ವರ್ಕರ್ ವೆಂಕಟೇಶಲು ಎ.ಆರ್.(45), ಸಂಘದ ಕಾರ್ಯದರ್ಶಿ ಎಚ್.ಎಂ.ಅಂದಾನಯ್ಯ(29) ಬಂಧಿತ ಆರೋಪಿಗಳಾಗಿದ್ದು, ಸರ್ಕಾರದಿಂದ ಸಬ್ಸಿಡಿ ಸಹಿತ ಸಾಲ ಕೊಡಿಸುವುದಾಗಿ ಹೇಳಿ ಹೊಸಪೇಟೆ ಸೇರಿದಂತೆ ಸುತ್ತಮುತ್ತಲಿನ 300 ಜನರಿಂದ 3 ಕೋಟಿ ರೂ. ಕಟ್ಟಿಸಿಕೊಂಡಿದ್ದರು ಎನ್ನಲಾಗಿದೆ.
ಆದರೆ ಕೊಟ್ಟ ಹಣ ಹಿಂದಿರುಗಿಸದೇ, ದ್ವಿಗುಣಗೊಳಿಸದೇ, ಸರ್ಕಾರದಿಂದ ಸಬ್ಸಿಡಿ ಸಾಲ ಸೌಲಭ್ಯ ಒದಗಿಸದೇ, ವಂಚನೆ ಮಾಡಿದ್ದರು. ಹೊಸಪೇಟೆ ನಿವಾಸಿ ಶೋಭಾ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ದೂರಿನ ಮೇರೆಗೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.