ಬೆಂಗಳೂರು: ರಾಜ್ಯದಲ್ಲಿ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಕ್ಟೋಬರ್ 24ರಿಂದ 27ರವರೆಗೆ ಲಿಖಿತ ಪರೀಕ್ಷೆಗಳನ್ನು ನಡೆಸಲಿದೆ.
ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ವೃಂದದ ಭೂಮಾಪಕ, ಗ್ರಾಮ ಆಡಳಿತಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಶಿಕ್ಷಕರ ಹುದ್ದೆಗಳಿಗೆ ಅಕ್ಟೋಬರ್ 24 ಮತ್ತು 25ರಂದು ಪರೀಕ್ಷೆ ನಡೆಯಲಿದೆ. ಉಳಿಕೆ ಮೂಲ ವೃಂದದ ಇಎಸ್ಐ ನರ್ಸಿಂಗ್ ಅಧಿಕಾರಿ, ಫಾರ್ಮಸಿ ಅಧಿಕಾರಿ ಹಾಗೂ ವಸತಿ ಶಾಲೆಗಳ ಶಿಕ್ಷಕರ ಹುದ್ದೆಗಳಿಗೆ ಅಕ್ಟೋಬರ್ 26 ಮತ್ತು 27ರಂದು ಪರೀಕ್ಷೆ ನಿಗದಿಪಡಿಸಲಾಗಿದೆ.
ಕಲ್ಯಾಣ ಕರ್ನಾಟಕ ವೃಂದದಲ್ಲಿ ಭೂಮಾಪಕರ 190, ಗ್ರಾಮ ಆಡಳಿತಾಧಿಕಾರಿಗಳ 67 ಹಾಗೂ ವಸತಿ ಶಾಲೆಗಳ ಶಿಕ್ಷಕರ 40 ಹುದ್ದೆಗಳಿಗೆ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಉಳಿಕೆ ಮೂಲ ವೃಂದದಲ್ಲಿ ಇಎಸ್ಐ ನರ್ಸಿಂಗ್ ಅಧಿಕಾರಿಗಳ 90, ಫಾರ್ಮಸಿ ಅಧಿಕಾರಿಗಳ 98 ಹಾಗೂ ವಸತಿ ಶಾಲೆಗಳ ಶಿಕ್ಷಕರ 100 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷೆಗಳನ್ನು ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳ 237 ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಒಟ್ಟು 89,265 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಉಳಿಕೆ ಮೂಲ ವೃಂದದ ಪರೀಕ್ಷೆಗಳು ಬೆಂಗಳೂರು ಸೇರಿದಂತೆ ಒಂಬತ್ತು ಜಿಲ್ಲೆಗಳ 119 ಕೇಂದ್ರಗಳಲ್ಲಿ ನಡೆಯಲಿದ್ದು, 48,767 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ವೆಬ್‌ಕಾಸ್ಟಿಂಗ್ ಮೂಲಕ ನಿಗಾ:
ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಪ್ರಕ್ರಿಯೆಗಳ ಮೇಲೆ ವೆಬ್‌ಕಾಸ್ಟಿಂಗ್ ಮೂಲಕ ನಿಗಾ ಇಡಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಪರೀಕ್ಷೆಯ ಉಸ್ತುವಾರಿ ವಹಿಸಲಿದ್ದಾರೆ.
ಪರೀಕ್ಷಾ ಸಿದ್ಧತೆಗಳ ಪರಿಶೀಲನೆಗಾಗಿ ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಹಾಗೂ ಪರೀಕ್ಷಾ ನಿಯಂತ್ರಕಿ ಅರ್ಚನಾ ಅವರು ಶುಕ್ರವಾರ ಸಂಬಂಧಪಟ್ಟ ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದರು. ಪರೀಕ್ಷೆಗಳಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿ, ಸುಗಮವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.







