ಮತಯಂತ್ರಗಳ ಸ್ಟ್ರಾಂಗ್ ರೂಮ್‌ಗೆ ಬಿಗಿಭದ್ರತೆ

0
haveri
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ : ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದ್ದು, 18ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದಲ್ಲಿ ಶೇ.77.60ರಷ್ಟು ಮತದಾನವಾಗಿದೆ. ಮತ ಎಣಿಕೆ ಕೇಂದ್ರವಾದ ದೇವಗಿರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಬಿಗಿಭದ್ರತೆಯಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ದಾಸ್ತಾನು ಮಾಡಲಾಗಿದೆ.

ಕೊಠಡಿ ಸುತ್ತಲೂ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ಕೊಠಡಿಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಹೊರ ಭಾಗದಲ್ಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ದಿನ 24 ತಾಸು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉಸ್ತುವಾರಿಗೆ ನೇಮಕ ಮಾಡಲಾಗಿದೆ ಹಾಗೂ ಕೇಂದ್ರ ಶಸ್ತ್ರಪಡೆ ಹಾಗೂ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಚುನಾವಣಾ ಆಯೋಗದಿಂದ ಜಿಲ್ಲೆಗೆ ನಿಯೋಜನೆಗೊಂಡ ಸಾಮಾನ್ಯ ವೀಕ್ಷಕರಾದ ಐಎಎಸ್ ಅಧಿಕಾರಿ ತಿತರ್‌ಮರೆ ಅವರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ವಿವಿಧ ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟರುಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಒಳಗೆ ಹಾಗೂ ಹೊರಗಿನ ಭದ್ರತಾ ಕ್ರಮ, ಪ್ರತಿ ಮತಯಂತ್ರಗಳ ವೀಕ್ಷಣೆ ನಡೆಸಿ ಭದ್ರತಾ ಕೊಠಡಿಗೆ ಸೀಲ್‌ಗಳನ್ನು ಮಾಡಿ, ಭದ್ರಪಡಿಸಲಾಯಿತು.

strong room

ಸ್ಟ್ರಾಂಗ್ ರೂಂಗಳ ಭದ್ರತೆಗೆ ಬಿಗಿ ಪೊಲೀಸ್ ಪಹರೆ ಹಾಕಲಾಗಿದ್ದು, ಮತಯಂತ್ರಗಳ ಭದ್ರತೆಗೆ ಸಿಸಿ ಕ್ಯಾಮರಾಗಳ ಜೊತೆಗೆ ಪೊಲೀಸರ ಹದ್ದಿನ ಕಣ್ಣು ಇರಿಸಲಾಗಿದೆ. ಓರ್ವ ಡಿಎಸ್‌ಪಿ, ಇಬ್ಬರು ಸಿಪಿಐ, ಆರು ಜನ ಪಿಎಸ್‌ಐ, ಎಂಟು ಜನ ಎಎಸ್‌ಐ, ಹೆಡ್ ಕಾನಸ್ಟೇಬಲ್ ಹಾಗೂ 36 ಪಿಸಿ ಸಿಬ್ಬಂದಿಗಳು, ಎರಡು ಜಿಲ್ಲಾ ಶಸ್ತ್ರ ಮೀಸಲು ಪಡೆ, ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.

ಸ್ಟ್ರಾಂಗ್ ರೂಂಗಳ ಭದ್ರತಾ ಪ್ರಕ್ರಿಯೆಯಲ್ಲಿ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮನಗೌಡ, ಗದಗ ಜಿ.ಪಂ ಸಿಇಓ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, 8 ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತೀ ಕೊಠಡಿಗೆ ಸಿಸಿ ಕ್ಯಾಮರಾ ಅಳವಡಿಕೆ, ಅಗ್ನಿನಿರೋಧಕ, ಜಲನಿರೋಧಕ, ಬೆಳಕಿನ ಕಿರಣಗಳು ಕೊಠಡಿಯೊಳಗೆ ನುಸುಳದಂತೆ ಎಲ್ಲ ಕಿಟಕಿ-ಬಾಗಿಲುಗಳನ್ನು ಭದ್ರಪಡಿಸಿ ಸುರಕ್ಷತಾ ಕ್ರಮಗಳನ್ನು ಪಕ್ಷದ ಏಜೆಂಟರ ಸಮ್ಮುಖದಲ್ಲಿ ಖಚಿತಪಡಿಸಲಾಗಿದೆ. ಸ್ಟ್ರಾಂಗ್ ರೂಂಗಳ ಉಸ್ತುವಾರಿಗಾಗಿ ಮೇ 7ರಿಂದ ಜೂನ್ 4ರವರೆಗೆ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸಲು 6 ಜನ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here