ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಟಿಪ್ಪರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಜರುಗಿದೆ.
ಅಣ್ಣ ತಮ್ಮಂದಿರಾದ ನರಸಿಂಹಮೂರ್ತಿ ಹಾಗೂ ನಂದೀಶ್ ಸೇರಿದಂತೆ ಅರುಣ್, ಮನೋಜ್ ಮೃತರು. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಈ ನಾಲ್ವರು ಚಿಕ್ಕಬಳ್ಳಾಪುರ ನಗರದ ಚರ್ಚ್ಗಳಿಗೆ ಭೇಟಿ ನೀಡಿ ಮರಳಿ ಸ್ವಗ್ರಾಮದತ್ತ ಹೊರಟಿದ್ದರು. ಮೃತ ನಾಲ್ವರು ಯುವಕರು ನರಸಿಂಹಮೂರ್ತಿಗೆ ಸೇರಿದ ಸಿಟಿ 100 ಬೈಕಿನಲ್ಲಿ ಹೊರಟಿದ್ದು ಇನ್ನೇನು ಅಜ್ಜವಾರ ಗ್ರಾಮಕ್ಕೆ ಹೈವೇಯಿಂದ ಬಲತಿರುವು ಪಡೆದುಕೊಳ್ಳಬೇಕಿತ್ತು. ಅಷ್ಟರಲ್ಲೇ ಯಮಸ್ವರೂಪಿಯಂತೆ ಟಿಪ್ಪರ್ ಲಾರಿ ಅಡ್ಡ ಬಂದಿದ್ದು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ವಿಚಾರ ತಿಳಿದು ಸ್ಥಳಕ್ಕೆ ಎಸ್ಪಿ ಕುಶಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ಮಾಡಿ ಮೃತ ದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಘಟನೆ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಸದ್ಯ ಟಿಪ್ಪರ್ ವಶಕ್ಕೆ ಪಡೆದಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.



