ಬೆಂಗಳೂರು:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕ್ರೀಡಾಪಟು ಓರ್ವ ನೇಣಿಗೆ ಶರಣಾಗಿರುವ ಘಟನೆ ಜರುಗಿದೆ.
ಹೆಸರಘಟ್ಟ ರಸ್ತೆ ಬಳಿಯ ಸಿಲುವೆಪುರದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತು 41 ವರ್ಷದ ಬಾಲರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಲರಾಜ್ 18 ವರ್ಷದ ಹಿಂದೆ ಕುಮಾರಿ ಎಂಬುವರನ್ನು ಎರಡನೇ ಮದುವೆಯಾಗಿದ್ದ. ಗ್ರಾಮಾಂತರ ಭಾಗದಲ್ಲಿ ಕ್ರಿಕೆಟ್ ಪಟುವಾಗಿದ್ದ ಬಾಲರಾಜ್ ಹೆಂಡತಿ ಕಿರುಕುಳದ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪವನ್ನು ಎದುರಿಸುತ್ತಿದ್ದ. ಈ ಸಂಬಂಧ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಗಲಾಟೆ ಬಳಿಕ ಬಾಲರಾಜ್ ಪತ್ನಿ ಮನೆ ತೊರೆದು ತವರು ಸೇರಿದ್ದಳು.
ಇತ್ತ ಯಾರೂ ಇಲ್ಲದ ವೇಳೆ ಡೆತ್‌ನೋಟ್ ಬರೆದು ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಬಾಲರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತದೇಹದ ಜೊತೆ ತಾನು ಪಡೆದಿದ್ದ ಟ್ರೋಫಿ, ಬ್ಯಾಟ್, ಬಾಲ್, ವಿಕೆಟ್ ಇಡುವಂತೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಕೊನೆಯ ಆಸೆಯಂತೆ ಶವದ ಪೆಟ್ಟಿಗೆಯಲ್ಲಿ ಎಲ್ಲವನ್ನೂ ಇಟ್ಟು ಅಂತಿಮ ಸಂಸ್ಕಾರ ಮಾಡಲಾಗಿದೆ. ಘಟನೆ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



