ವಿಜಯಸಾಕ್ಷಿ ಸುದ್ದಿ, ಗದಗ : ನಗರದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ಸ್ನೇಹಸಮ್ಮೇಳನ `ತೋಂಟದೋತ್ಸವ-2024′ ಅದ್ದೂರಿಯಾಗಿ ಜರುಗಿತು.
ಫಸ್ಟ್ ಜನರೇಷನ್ ಎಂಟರ್ಪ್ರೈಸಸ್ ನ ಮ್ಯಾನೆಜಿಂಗ್ ಡೈರಕ್ಟರ್ ರಮೇಶ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಹೇಗೆ ವಿದ್ಯಾರ್ಜನೆ ಮಾಡಬೇಕು, ಶಿಕ್ಷಣದ ನಂತರ ಉದ್ಯೋಗವಕಾಶಗಳನ್ನು ಹೇಗೆ ಸ್ವೀಕರಿಸಬೇಕು, ಮನೋಬಲವನ್ನು ಹೇಗೆ ಹೆಚ್ಚಿಸಿಸಿಕೊಳ್ಳಬೇಕು, ತಮ್ಮ ವ್ಯಕ್ತಿತ್ವದ ರಚನೆಯಲ್ಲಿ ಯಾವ ಯಾವ ವಿಷಯಗಳ ಕುರಿತು ಹೆಚ್ಚು ಆಸಕ್ತಿ ವಹಿಸಬೇಕು ಎಂಬುದನ್ನು ವಿವರಿಸಿದರು.
ಎಸ್‌ಟಿಎಸ್‌ಕೆಕೆ ಚೇರಮನ್ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಮಹಾವಿದ್ಯಾಲಯವು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಕನಸಾಗಿದ್ದು, ಇಂದು ಹಂತ ಹಂತಾವಾಗಿ ಬೆಳೆಯುತ್ತ ಸಾಗುತ್ತಿದೆ. ಅವರ ಆಶಯದಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುವಲ್ಲಿ ತನ್ನ ನಿರಂತರ ಪ್ರಯತ್ನವನ್ನು ಮಾಡುತ್ತಿದೆ. ನಮ್ಮ ಮಹಾವಿದ್ಯಾಲಯದಿಂದ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳು ಜಗತ್ತಿನ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದು, ಸಂಸ್ಥೆಯ ಕೀರ್ತಿಯನ್ನು ಬೆಳಗುತ್ತಿದ್ದಾರೆ. ವಿದ್ಯಾರ್ಥಿಗಳ ಬೆಳವಣಿಗೆಗೆ ಬೇಕಾದ ಎಲ್ಲ ಅನುಕೂಲತೆಗಳನ್ನು ಮಹಾವಿದ್ಯಾಲಯ ನೀಡಲು ಸಶಕ್ತವಾಗಿದ್ದು, ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲ ಡಾ. ಎಂ.ಎಂ. ಅವಟಿ ಮಹಾವಿದ್ಯಾಲಯದ ಪ್ರಸಕ್ತ ವರ್ಷದ ವರದಿಯನ್ನು ಓದಿದರು.
ವಿಟಿಯು ಮಟ್ಟದಲ್ಲೂ ಕೂಡ ವಿದ್ಯಾರ್ಥಿಗಳು ಒಳ್ಳೆಯ ಸಾಧನೆ ತೋರುತ್ತಿರುವುದು ಮಹಾವಿದ್ಯಾಲಯದ ಬೆಳವಣಿಗೆಗೆ ಧನಾತ್ಮಕತೆಯನ್ನು ತುಂಬುತ್ತದೆ ಎಂದು ನುಡಿದರು. ತೋಂಟದೋತ್ಸವ-2024ರ ಚೇರಮನ್ ಡಾ. ರಮೇಶ ಬಡಿಗೇರ, ಉಪ ಪ್ರಾಂಶುಪಾಲ ಡಾ. ಈರಣ್ಣ ಕೊರಚಗಾಂವ್, ವಿದ್ಯಾರ್ಥಿ ಪ್ರತಿನಿಧಿಗಳಾದ ಶಿವಮೂರ್ತಿ ರೇಷ್ಮೆ, ಭೂಮಿಕಾ, ನಂದೀಶ, ಪ್ರಾಂಜಲ್ ಉಪಸ್ಥಿತರಿದ್ದರು.
ಮಾನ್ಯ ಶೆಟ್ಟಿ, ಸೌಮ್ಯ ಬಾಕಳೆ, ದೀಪ್ತಿ ಗಾಣಿಗೇರ, ಶೃತಿ ಹವಳದ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಸೀಮಾ ಕುಲಕರ್ಣಿ, ಪ್ರಜ್ಞಾ ಪಾಟೀಲ ನಿರೂಪಿಸಿದರು. ಅದಿತಿ ವಂದಿಸಿದರು. ಸಾಯಂಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ತರನ್ನುಮ್ ನಿರೂಪಿಸಿದರು.