ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮೇ 7ರಂದು ಜರಗುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ಭಯಮುಕ್ತವಾಗಿ ಮತ ಚಲಾಯಿಸುವಂತೆ ಮಾಡಲು ಕೇರಳದ ರಿಸರ್ವ್ ಪೊಲೀಸ್ ಪಡೆಯ ಸಿಬ್ಬಂದಿಗಳು ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು.
ಮುಳಗುಂದ ಠಾಣಾ ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಕೇರಳದ ರಿಸರ್ವ್ (ಸಿಐಎಸ್‌ಎಫ್) ಪೊಲೀಸ್ ಅಧಿಕಾರಿಗಳು ಹಾಗೂ ಮುಳಗುಂದ ಪೊಲೀಸ್ ಸಿಬ್ಬಂದಿಗಳ ತಂಡ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.
ಮುಳಗುಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶಿಸ್ತುಬದ್ಧರಾಗಿ ಕೈಯಲ್ಲಿ ಶಸ್ತ್ರಗಳನ್ನು ಹಿಡಿದು ಹೆಜ್ಜೆ ಹಾಕುತ್ತಿರುವ ಪೊಲೀಸ್ ಸಿಬ್ಬಂದಿಗಳನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.
ಮೇ 7ರಂದು ಜರಗುವ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟಗೆ ಬಂದು ತಮ್ಮ ಮತವನ್ನು ಚಲಾವಣೆ ಮಾಡಬೇಕು, ಸಾರ್ವಜನಿಕರ ರಕ್ಷಣೆಗೆ ನಾವಿದ್ದೇವೆ. ಚುನಾವಣೆಯಲ್ಲಿ ಶಾಂತಿ-ಸುವ್ಯವಸ್ಥೆಯ ಪಾಲನೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಮುಳಗುಂದದಲ್ಲಿ ಬೀಡುಬಿಟ್ಟಿದ್ದು, ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸಲಾಗುತ್ತಿದೆ ಎಂದು ಮುಳಗುಂದ ಠಾಣಾ ಸಿಪಿಐ ಸಂಗಮೇಶ ಶಿವಯೋಗಿ ತೀಳಿಸಿದರು.
ಮುಳಗುಂದ ಪಟ್ಟಣದ ಚಿಂಚಲಿ ಕ್ರಾಸ್, ವಾಲಿ ಕ್ರಾಸ್, ಗಾಂಧಿ ಕಟ್ಟೆ, ಕಬ್ಬನಕಟ್ಟೆ, ಅಂಬೇಡ್ಕರ್ ನಗರ, ಶೇಖಿ ಓಣಿ, ಸಿದ್ದೇಶ್ವರ ಗುಡಿ, ಬಾಲಲೀಲಾ ಮಾಹಾಂತ ಶಿವಯೋಗಿ ಗವಿಮಠದ ಮೂಲಕ ಪೊಲೀಸ್ ಠಾಣೆವರೆಗೂ ಪಥ ಸಂಚಲನ ಜರುಗಿತು.