ಬೆಂಗಳೂರು: ₹5,000 ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಪುಲಕೇಶಿನಗರ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿ ಸಾಹಿಲ್ ಬಾಗ್ಲಾ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡಿರುವ ಹೆಡ್ ಕಾನ್ಸ್‌ಟೇಬಲ್‌ರನ್ನು ಸೋಮಶೇಖರ್ ಎಂದು ಗುರುತಿಸಲಾಗಿದೆ.
ವಾಹನ ತಪಾಸಣೆ ವೇಳೆ ಕಬ್ಬಿಣ ಸಾಗಿಸುತ್ತಿದ್ದ ಲಾರಿ ಚಾಲಕ ಸಯ್ಯದ್ ಅಪ್ರೋಜ್ ಅವರಿಂದ ₹5,000 ಲಂಚ ಪಡೆದ ಆರೋಪ ಸೋಮಶೇಖರ್ ಅವರ ಮೇಲಿದೆ. ಪ್ರಕರಣ ದಾಖಲಿಸಿದರೆ ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ಬೆದರಿಸಿ ಹಣ ಪಡೆದಿದ್ದಾರೆ ಎನ್ನಲಾಗಿದೆ.
ಲಂಚ ನೀಡುವ ವೇಳೆ ಲಾರಿ ಚಾಲಕ ಅಪ್ರೋಜ್ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದು, ಬಳಿಕ ಅದನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಡಿಯೋ ಪರಿಶೀಲಿಸಿದ ಬಳಿಕ ಕರ್ತವ್ಯ ಲೋಪ ಹಾಗೂ ಲಂಚ ಸ್ವೀಕಾರದ ಆರೋಪದಡಿ ಹೆಡ್ ಕಾನ್ಸ್‌ಟೇಬಲ್ ಸೋಮಶೇಖರ್ ಅವರನ್ನು ಅಮಾನತು ಮಾಡಲಾಗಿದೆ.
ಘಟನೆ ಕುರಿತು ಇಲಾಖಾ ಮಟ್ಟದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.



