ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ಫಲವೃಕ್ಷೋದ್ಯಾನಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ವಾರ್ಷಿಕ ಆಧಾರದ ಮೇಲೆ ಪಾರದರ್ಶಕ ಹರಾಜು ಮೂಲಕ ಅದೇ ಗ್ರಾಮದ ಯುವಕರಿಗೆ ಗುತ್ತಿಗೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ನಿರ್ದೇಶನ ನೀಡಿರುವ ಸಚಿವರು, ಪ್ರತಿ ಗ್ರಾಮದಲ್ಲೂ ಫಲವೃಕ್ಷೋದ್ಯಾನಗಳನ್ನು ನಿರ್ಮಿಸಿದರೆ ಹಸಿರು ಹೊದಿಕೆ ವಿಸ್ತಾರವಾಗುವುದರ ಜೊತೆಗೆ ನಿರುದ್ಯೋಗಿ ಹಾಗೂ ಭೂರಹಿತ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದ್ದಾರೆ. ಅಲ್ಲದೆ ಗ್ರಾಮ ಪಂಚಾಯಿತಿಗಳು ಮತ್ತು ಕಂದಾಯ ಇಲಾಖೆಗೆ ಹೆಚ್ಚುವರಿ ಆದಾಯವೂ ಲಭ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಮೀನಿನಲ್ಲಿ ಮಾವು, ಸಪೋಟ, ಬೆಟ್ಟನೆಲ್ಲಿಕಾಯಿ, ತೆಂಗು, ಹೈಬ್ರೀಡ್ ನೇರಳೆ, ಹುಣಸೆ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯುವಂತೆ ಸಚಿವರು ಸಲಹೆ ನೀಡಿದ್ದಾರೆ.
ಇದರಿಂದ ಸರ್ಕಾರಿ ಜಮೀನುಗಳ ಅತಿಕ್ರಮಣವನ್ನು ತಡೆಯಲು ಸಾಧ್ಯವಾಗಲಿದ್ದು, ಭವಿಷ್ಯದಲ್ಲಿ ಅಗತ್ಯವಿದ್ದರೆ ಮರಗಳನ್ನು ತೆರವುಗೊಳಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಯನ್ನು ಬಳಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಹಾಗೂ ಸಂಪರ್ಕ ರಸ್ತೆಗಳ ಎರಡೂ ಬದಿಯಲ್ಲಿ ಮಾವು, ಹುಣಸೆ ಸೇರಿದಂತೆ ಫಲ ನೀಡುವ ಮರಗಳನ್ನು ನೆಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಮರಗಳಿಂದ ದೊರೆಯುವ ಫಲವನ್ನು ವಾರ್ಷಿಕ ಹರಾಜು ಮೂಲಕ ಸ್ಥಳೀಯರಿಗೆ ಗುತ್ತಿಗೆ ನೀಡಿದರೆ ಪಂಚಾಯಿತಿಗಳ ಆದಾಯ ಹೆಚ್ಚುವುದರ ಜೊತೆಗೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆರ್ಥಿಕ ನೆರವು ದೊರೆಯಲಿದೆ. ಜೊತೆಗೆ ಸ್ಥಳೀಯ ಯುವಕರಿಗೂ ಹೆಚ್ಚುವರಿ ಆದಾಯದ ಮೂಲ ಸೃಷ್ಟಿಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ವಿಬಿಜಿ ರಾಮ್ಜಿ ಸಹಯೋಗದಲ್ಲಿ ಸಮಗ್ರ ಕ್ರಿಯಾಯೋಜನೆ ರೂಪಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಈಶ್ವರ ಬಿ. ಖಂಡ್ರೆ ನಿರ್ದೇಶನ ನೀಡಿದ್ದಾರೆ.



