ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಮನಸ್ಸು ಒಂದು ಉದ್ಯಾನವನವಿದ್ದಂತೆ. ಉತ್ತಮ ಯೋಚನೆಗಳೇ ಅದರಲ್ಲಿನ ಬೀಜಗಳು. ಹೂವು ಬೆಳೆಯಬೇಕೋ, ಕಳೆ ಬೆಳೆಯಬೇಕೋ ಎಂಬುದನ್ನು ನಿರ್ಧರಿಸುವವರು ನಾವೇ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಯೋಚನೆಗಳನ್ನು ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಚಿಂತಕ ಸುಮಂತ ಕುಮುಚಗಿ ಹೇಳಿದರು.
ಗದುಗಿನ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ. ೧ ಹಾಗೂ ಹೆಣ್ಣು ಮಕ್ಕಳ ಶಾಲೆ ನಂ. ೧ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಆಯೋಜಿಸಿದ್ದ ಶ್ರಾವಣ ಮಾಸದ ‘ಅಮೃತ ಭೋಜನ–ಜ್ಞಾನ ಸಿಂಚನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಕರು ನಮ್ಮ ಬದುಕಿನ ದಾರಿದೀಪ. ಬಾಲ್ಯದಲ್ಲಿಯೇ ಬದುಕಿನ ಸುಂದರ ಕಲ್ಪನೆಗಳನ್ನು ಮಕ್ಕಳಲ್ಲಿ ಮೂಡಿಸಿ, ಅವುಗಳಿಗೆ ರೆಕ್ಕೆ ಕಟ್ಟಿ ಪ್ರಗತಿಯತ್ತ ಕೊಂಡೊಯ್ಯುವವರು ಶಿಕ್ಷಕರು. ಇಂದು ನಾವು ಸಾಧನೆ ಮಾಡಿದ್ದರೆ ಅದರ ಹಿಂದೆ ಶಿಕ್ಷಕರ ಅಭಯ ಹಸ್ತವಿದೆ. ಹೀಗಾಗಿ ಮಕ್ಕಳು ಶಿಕ್ಷಕರನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.
ಮಕ್ಕಳಿಗೆ ಸಿಹಿಭೋಜನ ವಿತರಿಸಿ ಮಾತನಾಡಿದ ಚಿಂತಕಿ ರೇಣುಕಾ ಅಮಾತ್ಯ, ನಮ್ಮ ಹೆಸರುಗಳು ಕೇವಲ ಗುರುತಿನ ಚೀಟಿಗಳಲ್ಲ. ಅವು ನಮ್ಮ ಮನೋಭಾವ, ಸಮಾಜದ ದೃಷ್ಟಿಕೋನ ಹಾಗೂ ಮೌಲ್ಯಗಳನ್ನು ರೂಪಿಸುವ ಶಕ್ತಿ ಹೊಂದಿವೆ. ಹೆಸರನ್ನು ಹಸಿರಾಗಿಸಿಕೊಳ್ಳಲು ಮಕ್ಕಳು ಸಜ್ಜನರ ಸಂಗ ಮಾಡಬೇಕು. ಶಿಕ್ಷಕರು, ತಂದೆ-ತಾಯಿ ಹಾಗೂ ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದ ಚಿಂತಕಿ ಶಿವಲೀಲಾ ಅಕ್ಕಿ, ನಮ್ಮಲ್ಲಿ ಸಮರಸತೆಯ ಭಾವನೆ ನನಸಾಗಬೇಕು. ಇಷ್ಟಪ್ರೇಮ ಹಾಗೂ ಗುರುಭಕ್ತಿ ಸದೃಢವಾಗಬೇಕು. ಆಪ್ತತೆ ಮತ್ತು ವಿನಮ್ರತೆ ಸದಾ ಇರಲಿ. ದುಶ್ಚಟಗಳಿಂದ ದೂರವಿದ್ದು, ಗುರುವಿನ ಆದೇಶಗಳನ್ನು ಪಾಲಿಸುತ್ತ ಏಕಾಗ್ರತೆಯಿಂದ ಶಿಕ್ಷಣ ಪಡೆದು ಉತ್ತಮ ಮಕ್ಕಳಾಗಬೇಕು ಎಂದು ಸಲಹೆ ನೀಡಿದರು.
ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯವು ಸರ್ಕಾರಿ ಶಾಲೆಗಳಿಗೆ ಆಗಮಿಸಿ ಅಗತ್ಯ ಸೌಲಭ್ಯಗಳ ಬಗ್ಗೆ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ಸಿಹಿಭೋಜನದ ಜತೆಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳು ಹಾಗೂ ಶಿಕ್ಷಕ ಬಳಗಕ್ಕೆ ಸ್ಫೂರ್ತಿ ತುಂಬುತ್ತಿರುವ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಎಂ.ಕೆ.ಬಿ.ಎಸ್. ನಂ. ೧ ಹಾಗೂ ಕೆ.ಜಿ.ಎಸ್. ನಂ. ೧ ಶಾಲೆಗಳ ಮಕ್ಕಳಿಗೆ ಸಿಹಿಭೋಜನ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ಸಂಜನಾ ಸಾಳುಂಕೆ, ದಿವ್ಯ ದೊಡ್ಡಮನಿ, ಪಲ್ಲವಿ ಪತ್ತಾರ ಹಾಗೂ ವೈಷ್ಣವಿ ಶಿಗ್ಲಿ ವಚನ ಪ್ರಾರ್ಥನೆ ನೆರವೇರಿಸಿದರು.
ಮುಖ್ಯೋಪಾಧ್ಯಾಯಿನಿ ವಿ.ಎಸ್. ಜಕರಡ್ಡಿ ಸ್ವಾಗತಿಸಿದರು. ಎಚ್.ಎಲ್. ಆಸಂಗಿ ಪರಿಚಯಿಸಿದರು. ವಿ.ಎ. ಕುಂಟೋಜಿ ನಿರೂಪಿಸಿದರು. ಸರ್ವಮಂಗಳಾ ಗುಜಮಾಗಡಿ ನಿರ್ವಹಿಸಿದರು. ಎಫ್.ಎಸ್. ಹಿರೇಮಠ ವಂದಿಸಿದರು.
ಶೋಭಾ ವಗ್ಗಿ, ಶ್ರೇಯಾ ಬಾರಾಟಕ್ಕೆ ಸೇರಿದಂತೆ ಶಾಲಾ ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.



