ಬೆಂಗಳೂರು: ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಧನಕ್ಕೆ ಗಣ್ಯರು ಸೇರಿದಂತೆ ಹಲವಾರು ಮಂದಿ ಕಂಬನಿ ಮಿಡಿದಿದ್ದಾರೆ. ಇದೀಗ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ.
ಸಾಲುಮರದ ತಿಮ್ಮಕ್ಕ ಕರ್ನಾಟಕದ ಹೆಮ್ಮೆಯ ಪರಿಸರ ಪ್ರಚಾರಕರಾಗಿದ್ದರು. ಮಕ್ಕಳಿಲ್ಲದ ಈ ಮಹಾತಾಯಿ ಮರಗಳನ್ನೇ ಮಕ್ಕಳಂತೆ ಬೆಳೆಸುವ ಮೂಲಕ ಹಸಿರಿನ ಮಹತ್ವವನ್ನು ಜಗತ್ತಿಗೆ ಸಾರಿದ್ದರು.
ಅನಕ್ಷರಸ್ಥರಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿ, ಗೌರವ ಡಾಕ್ಟರೇಟ್‌ಗೆ ಪಾತ್ರರಾಗಿದ್ದರು. ಜೊತೆಗೆ ಅವರಿಗೆ ಪದ್ಮಶ್ರೀ ಸೇರಿದಂತೆ ಅತ್ಯುನ್ನತ ಪ್ರಶಸ್ತಿಗಳು ಲಭಿಸಿದ್ದವು ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ತಿಮ್ಮಕ್ಕನವರು ಎಷ್ಟು ಮುಗ್ಧರಾಗಿದ್ದರೆಂದರೆ ತಮಗೆ ಪ್ರಶಸ್ತಿ ನೀಡಿದ ರಾಷ್ಟ್ರಪತಿಗಳ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದರು. ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೂಡ ಅಷ್ಟೇ ಮುಗ್ಧತೆಯಿಂದ ಅವರ ಆಶೀರ್ವಾದವನ್ನು ಸ್ವೀಕರಿಸಿದ್ದರು ಎಂದು ಸ್ಮರಿಸಿದ್ದಾರೆ.


