
ವಿಜಯಸಾಕ್ಷಿ ಸುದ್ದಿ, ಗದಗ: ಕಾಡು ಬೆಳೆಸಿ, ನಾಡು ಉಳಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಮ್ಮ ಮನೆಯ ಸುತ್ತ ಮುತ್ತ ಹಾಗೂ ನಮಗೆ ಸೇರಿದ ಕೃಷಿ ಭೂಮಿಯಲ್ಲಿ ಸಾಧ್ಯವಾದಷ್ಟು ಹೆಚ್ಚು ಗಿಡಗಳನ್ನು ಬೆಳೆಸುವುದರೊಂದಿಗೆ ಪರಿಸರ ಸಂರಕ್ಷಣೆಗೆ ನಾವು ಮುಂದಾಗಬೇಕು ಎಂದು ಡಾ. ಪ್ರದೀಪ ಉಗಲಾಟದ ಹೇಳಿದರು.
ಅವರು ಗದಗ ಜಿಲ್ಲಾ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಜರುಗಿದ `ಪರಿಸರ ಸಂರಕ್ಷಣೆ’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಇತ್ತಿಚೀನ ದಿನಗಳಲ್ಲಿ ಬಿಸಿಲಿನ ತಾಪಮಾನ ಅತಿರೇಕವಾಗಿದ್ದು, ಜೀವ ಸಂಕುಲದ ಬದುಕಿಗೆ ತೊಂದರೆಯಾಗಿದೆ. ಮರಗಳು ಜೀವಕುಲಕ್ಕೆ ಜೀವ ಸಂಜೀವಿನಿ ಆಮ್ಲಜನಕ ಒದಗಿಸುವ ಶಕ್ತಿ ವರ್ಧಕಗಳು. ಅದಕ್ಕಾಗಿ ಹೆಚ್ಚು ಗಿಡಗಳನ್ನು ನಾವು ನೆಡಬೇಕು. ಅವುಗಳು ನಾಶಗೊಳ್ಳದಂತೆ ಎಚ್ಚರಿಕೆ ವಹಿಸುವ ಮೂಲಕ ಪರಿಸರ ಸಂರಕ್ಷಣೆಯ ಜವಾಬ್ದಾರಿ ನಿಭಾಯಿಸಬೇಕು ಎಂದರು.
ಮುಖ್ಯ ಅತಿಥಿಗಳಾದ ಜ್ಯೋತಿ ದಾನಪ್ಪಗೌಡ್ರ ಮಾತನಾಡಿ, ಜೀವ ವೈವಿಧ್ಯದ ಉಳಿವಿಗಾಗಿ ನಾವೆಲ್ಲರೂ ಪಣ ತೊಡಬೇಕು. ಹಸಿರು ಪ್ರಕೃತಿಯು ನಮ್ಮ ಪೂರ್ವಜರು ನಮಗೆ ನೀಡಿದ ಅತ್ಯಮೂಲ್ಯ ಕೊಡುಗೆ. ನಾವು ನಮ್ಮ ಮಕ್ಕಳ ಸದೃಢ ಆರೋಗ್ಯಕ್ಕಾಗಿ ಸುಂದರ ಪ್ರಕೃತಿಯನ್ನು ಉಳಿಸಿ ಅದನ್ನು ಸಂರಕ್ಷಣೆ ಮಾಡೋಣ ಎಂದರು.
ಪ್ರಾಸ್ತಾವಿಕವಾಗಿ ಕವಿತಾ ದಂಡಿನ ಮಾತನಾಡಿ, ನಾವು ನಮ್ಮ ಪರಿಸರ ಹಾಗೂ ಭೂಮಿಯನ್ನು ನಮ್ಮ ಸ್ವಂತಕ್ಕಾಗಿ ದುರಪಯೋಗ ಮಾಡಿಕೊಳ್ಳುತ್ತಿದ್ದೇವೆ. ಅದು ನಮಗೆ ಸೇರಿದ್ದು ಎಂದು ನಾವು ಭಾವಿಸಿ ಅದನ್ನು ವಿನಾಶಗೊಳಿಸುತ್ತಿದ್ದೇವೆ. ನಮ್ಮ ಮುಂಬರುವ ಪೀಳಿಗೆಯು ಸುಂದರಾವಾದ ಜೀವನವನ್ನು ಕಟ್ಟಿಕೊಳ್ಳಲು ಉತ್ತಮ ಆರೋಗ್ಯಕ್ಕಾಗಿ, ಸಂತಸದಾಯಕ ಬದುಕಿಗಾಗಿ, ಹಸಿರು ಪರಿಸರ ನಿರ್ಮಾಣವೇ ನಮ್ಮೆಲ್ಲರ ಗುರಿಯಾಗಿರಲಿ ಎಂದರು
ರೇಖಾ ರೊಟ್ಟಿ ಮಾತನಾಡಿ, ಡಾ. ಪ್ರದೀಪ ಹಾಗೂ ನೀಲಾಂಬಿಕಾ ಉಗಲಾಟ ತಮ್ಮ ಸ್ವಂತ 11 ಎಕರೆ ಜಮೀನಿನಲ್ಲಿ ವಿವಿಧ ಗಿಡಮರಗಳನ್ನು ಬೆಳೆಸಿ ಮಾನವ ನಿರ್ಮಿತ ಕಾಡು ನಿರ್ಮಾಣ ಮಾಡಿದ್ದು ಇವರ ಸಾಧನೆ ನಮಗೆಲ್ಲ ಮಾದರಿಯಾಗಿದೆ ಎಂದರು.
ಶ್ರೀನಿಧಿ ಉಗಲಾಟ ಪರಿಸರ ಗೀತೆ ಹಾಡಿದರು, ಸಾಗರಿಕಾ ಅಕ್ಕಿ ಸ್ವಾಗತಿಸಿದರು. ಮೀನಾಕ್ಷಿ ಕೊರವನವರ ಪರಿಚಯಿಸಿದರು. ರೇಣುಕಾ ಪಾಟೀಲ ನಿರೂಪಿಸಿದರು. ಜಯಶ್ರೀ ಉಗಲಾಟ ವಂದಿಸಿದರು. ಕಾರ್ಯಕ್ರಮದಲ್ಲಿ ಜಯಶ್ರೀ ಗೌರಿಪುರ, ಜಯಲಕ್ಷ್ಮೀ ಉಗಲಾಟ, ಸ್ಮೃತಿ ಪಾಟೀಲ, ಸಂಗೀತಾ ಗೌಡರ, ಲಕ್ಷ್ಮೀ ಮುಂತಾದವರಿದ್ದರು.
ಚಿಂತಕಿ ಸುವರ್ಣ ವಸ್ತçದ ಮಾತನಾಡಿ, ವಿಷಮುಕ್ತ ಶುದ್ಧ ಗಾಳಿಗಾಗಿ ಹಾಗೂ ಮುಂದಿನ ಪೀಳಿಗೆಯ ಆರೋಗ್ಯ ರಕ್ಷಣೆಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಹೆಚ್ಚು ಗಿಡಗಳನ್ನು ನೆಡುವುದು, ಗಿಡಮರಗಳನ್ನು ಕಡಿಯದಂತೆ ರಕ್ಷಿಸುವುದು ಈ ಜವಾಬ್ದಾರಿಗಳನ್ನು ನಾವು ಒಬ್ಬೊಬ್ಬರಾಗಿಯೇ ನಿಭಾಯಿಸಬೇಕು. ಅಂದಾಗ ಉತ್ತಮ ಹಾಗೂ ಹಸಿರು ಪರಿಸರ ಉಳಿದೀತು ಎಂದರು.