ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಕಮೆಂಟ್‌ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೆಲೆಬ್ರಿಟಿಗಳು ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ. ಈ ಪೈಕಿ ನಟಿ ವಿಜಯಲಕ್ಷ್ಮೀ ಕೂಡ ಇತ್ತೀಚೆಗೆ ಹೇಟ್ ಕಮೆಂಟ್‌ಗಳಿಂದ ತೊಂದರೆ ಅನುಭವಿಸಿದ್ದು, ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ತಮಗೆ ಬಂದ ಅವಹೇಳನಕಾರಿ ಕಮೆಂಟ್‌ಗಳು ಮತ್ತು ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ವಿಜಯಲಕ್ಷ್ಮೀ ಸೈಬರ್ ಅಪರಾಧ ವಿಭಾಗಕ್ಕೆ ಸಲ್ಲಿಸಿದ್ದು, ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಈ ಹಿಂದೆ ನಟ ಸುದೀಪ್ ಅವರು ‘ಸಿನಿಮಾ ರಿಲೀಸ್ ವೇಳೆ ಒಂದು ಪಡೆ ಯುದ್ಧಕ್ಕೆ ರೆಡಿ ಇದೆ’ ಎಂದು ಹೇಳಿದ್ದ ಹೇಳಿಕೆ, ದರ್ಶನ್ ಅಭಿಮಾನಿಗಳಿಗೆ ಉದ್ದೇಶಿತವಾಗಿದೆ ಎಂದು ಕೆಲವರು ವ್ಯಾಖ್ಯಾನಿಸಿದ್ದರು.
ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದರಿಂದ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದವು. ಈ ವಿಚಾರದ ನಂತರವೇ ವಿಜಯಲಕ್ಷ್ಮೀ ವಿರುದ್ಧ ಹೇಟ್ ಕಮೆಂಟ್‌ಗಳ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ. ಈ ಸಂಬಂಧವಾಗಿ ವಿಜಯಲಕ್ಷ್ಮೀ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ಹೇಟ್ ಕಮೆಂಟ್ ಹಾಕಿದ ಖಾತೆಗಳ ಸ್ಕ್ರೀನ್‌ಶಾಟ್ ಹಾಗೂ ವಿವರಗಳನ್ನು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸೈಬರ್ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ದೂರು ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ವಿಜಯಲಕ್ಷ್ಮೀ ಖಾತೆಗೆ ಬಂದ ಕೆಲವು ಕಮೆಂಟ್‌ಗಳು ಸುದೀಪ್ ಅಭಿಮಾನಿಗಳಿಂದ ಬಂದಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ. ಕಾರಣ, ಕೆಲ ಖಾತೆಗಳು ಸುದೀಪ್ ಅಭಿಮಾನಿಗಳ ಹೆಸರಿನಲ್ಲಿ ಇದ್ದರೆ, ಇನ್ನೂ ಕೆಲವರು ಸುದೀಪ್ ಹೆಸರು ಹಾಗೂ ಸ್ಟಿಕ್ಕರ್‌ಗಳನ್ನು ಬಳಸಿದ್ದಾರೆ. ಈ ಖಾತೆಗಳು ನಿಜವಾದ ಅಭಿಮಾನಿಗಳವೇ ಎಂಬುದು ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.



