ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಂಥಾಲಯಗಳು ಗ್ರಾಮೀಣ ಪ್ರದೇಶದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಗ್ರಾಮೀಣ ಭಾಗದ ಯುವಜನರ ಜ್ಞಾನ ದಾಹದ ಬುಗ್ಗೆಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಗ್ರಂಥಾಲಯಗಳು ನೆರವಾಗುತ್ತಿವೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಅಭಿಪ್ರಾಯಪಟ್ಟರು.
ತಾಲೂಕಿನ ವಿವಿಧ ಗ್ರಾ.ಪಂ ವ್ಯಾಪ್ತಿಯ ಅರಿವು ಕೇಂದ್ರಗಳ ಮೇಲ್ವಿಚಾರಕರು ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳ ಗ್ರಂಥಾಲಯಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿವೆ. ಅಲ್ಲಿರುವ ಕಾರ್ಯಕರ್ತರು ಗ್ರಾಮೀಣ ಜನರಲ್ಲಿ ಓದಿನ ಆಸಕ್ತಿ ಮೂಡಿಸಲು ಪ್ರಯತ್ನಿಸಬೇಕು. ಆ ಮೂಲಕ ಅವರ ಜ್ಞಾನವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಈಗಿರುವ ವಿವಿಧ ಸೌಲಭ್ಯಗಳ ಜೊತೆಗೆ ಗ್ರಾಮೀಣ ಗ್ರಂಥಾಲಯಗಳಿಗೆ ಇನ್ನೂ ಹೆಚ್ಚಿನ ಅಗತ್ಯ ಸೌಲಭ್ಯ ಹಾಗೂ ಸೌಕರ್ಯಗಳನ್ನು ಒದಗಿಸಬೇಕು ಎಂದು ಅರಿವು ಕೇಂದ್ರದ ಮೇಲ್ವಿಚಾರಕರು ಮನವಿ ಮಾಡಿಕೊಂಡರು.
ತಾಲೂಕಿನ ವಿವಿಧ ಗ್ರಾಮಗಳ ಅರಿವು ಕೇಂದ್ರಗಳ ಮೇಲ್ವಿಚಾರಕರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹಾಗೂ ಯೋಜನಾಧಿಕಾರಿ ವಿಜಯಕುಮಾರ ಬೆಣ್ಣೆ ಅವರನ್ನು ಸನ್ಮಾನಿಸಿದರು.
ತಾ.ಪಂ ವ್ಯವಸ್ಥಾಪಕ ಫಕ್ರುದ್ದಿನ್ ನದಾಫ್, ಸಹಾಯಕ ನಿರ್ದೇಶಕ ಪ್ರವೀಣ ಗೋಣೆಮ್ಮನವರ, ಗ್ರಂಥಾಲಯ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಗವಿಶಿದ್ದಪ್ಪ ಹಳ್ಳಾಕಾರ, ತಾಲೂಕು ಘಟಕದ ಅಧ್ಯಕ್ಷ ಪಿ.ಎಚ್. ಪವಾರ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳ ಮೇಲ್ವಿಚಾರಕರು ಇದ್ದರು.