ಅಮೃತಧಾರೆ ಸೇರಿದಂತೆ ಇನ್ನೂ ಹಲವು ಧಾರವಾಹಿಗಳಲ್ಲಿ ನಟಿಸಿದ್ದ ಕಿರುತೆರೆ ನಟಿ ಶ್ರುತಿ ಮೇಲೆ ಆಕೆಯ ಪತಿಯೇ ಭೀಕರವಾಗಿ ಹಲ್ಲೆ ಮಾಡಿದ್ದ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು. ನಟಿ ಶ್ರುತಿ ನೀಡಿದ ದೂರಿನ ಮೇರೆಗೆ ಹನುಮಂತ ನಗರ ಪೊಲೀಸರು ಆಕೆಯ ಪತಿ ಅಮರೇಶ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಅಮರೇಷ್ ಪತ್ನಿ ಶ್ರುತಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.
‘ನಾವು 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದು. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶ್ರೀನಗರದಲ್ಲಿ ಪ್ಲಾಟ್ ಒಂದನ್ನ 27 ಲಕ್ಷ ರೂಪಾಯಿ ಕೊಟ್ಟು ಲೀಸ್ಗೆ ಹಾಕಿಕೊಂಡು ವಾಸ ಮಾಡ್ತಿದ್ವಿ. ಇಬ್ಬರು ಹೆಣ್ಣು ಮಕ್ಕಳಿಗೆ ತಾಯಿ ಪ್ರೀತಿಯನ್ನು ಶ್ರುತಿ ಕೊಟ್ಟಿಲ್ಲ. ಮನೆ ಜವಾಬ್ದಾರಿಯನ್ನೆಲ್ಲ ನಾನೇ ನೋಡಿಕೊಳ್ತಿದ್ದೆ. ಶೂಟಿಂಗ್ ನೆಪದಲ್ಲಿ ಸರಿಯಾಗಿ ಮನೆಗೆ ಬಾರದೇ ಪಾರ್ಟಿ ಪಬ್ ಅಂತ ಸುತ್ತಾಡ್ತಿದ್ಲು’ ಎಂದು ಅಮರೇಶ್ ಆರೋಪಿಸಿದ್ದಾರೆ.
ಮನೆಯಲ್ಲಿ ‘ಯಾರಿಗೂ ಹೇಳದೇ 15 ದಿನ ಪ್ರಯಾಗ್ ರಾಜ್ಗೆ ಟ್ರಿಪ್ ಹೋಗಿದ್ದಳು. ಇದೇ ವಿಚಾರಕ್ಕೆ ಈ ಹಿಂದೆಯೂ ಗಲಾಟೆ ಆಗಿತ್ತು. ಗಂಡ-ಮಕ್ಕಳಿದ್ದರೂ ಕೂಡ ಅಣ್ಣನ ಜೊತೆ ಇರ್ತೀನಿ ಅಂತ ಮನೆ ಬಿಟ್ಟು ಹೋಗಿದ್ದಳು. ಎಷ್ಟೋ ರಾತ್ರಿಗಳು ಶ್ರುತಿ ಮನೆಗೆ ಬರುತ್ತಿರಲಿಲ್ಲ. ಫೋನ್ ಮಾಡಿದ್ರೆ ಎನ್ ಮಾಡ್ಕೋತಿಯೋ ಮಾಡ್ಕೋ ಎನ್ನುತ್ತಿದ್ದಳು. ಭೋಗ್ಯಕ್ಕಿದ್ದ ಮನೆಯನ್ನ ಖಾಲಿ ಮಾಡಿ ಹಣ ತೆಗೆದುಕೊಂಡು ಮನೆ ಬಿಡೋಣ ಅನ್ನೋದು ಅವಳ ಪ್ಲಾನ್ ಆಗಿತ್ತು’ ಎಂದು ಅಮರೇಶ್ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ.
‘ಕಳೆದ ವಾರ ರಾಜಿ ಸಂಧಾನ ಆದಮೇಲೂ ಮತ್ತೆ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿಯೇ ಆಕೆಯನ್ನ ಕೊಲೆ ಮಾಡಿ ಇದಕ್ಕೆಲ್ಲ ಇತಿಶ್ರೀ ಹಾಡೋಣ ಅಂತಿದ್ದೆ. ಆದ್ರೆ ಕೊಲೆ ಮಾಡುವಾಗ ಕಾಲಿಗೆ ಬಿದ್ದು ಕ್ಷಮೆ ಕೇಳಿದಳು. ನೀನು ಹೇಳಿದ ರೀತಿ ನಾನು ಕೇಳುತ್ತೇನೆ ಎಂದು ಕಾಲಿಗೆ ಬಿದ್ದಳು. ಹೆಂಡತಿ ಇನ್ಮೇಲಾದ್ರೂ ಬದಲಾಗ್ತಾಳೆ ಅಂತ ಕೊಲೆ ಮಾಡೋದನ್ನ ಬಿಟ್ಟು ಸುಮ್ಮನಾದೆ’ ಎಂದು ಪೊಲೀಸರ ಮುಂದೆ ಅಮರೇಶ್ ಹೇಳಿಕೆ ನೀಡಿದ್ದಾರೆ.
ಸದ್ಯ ಅಮರೇಷ್ ಪೊಲೀಸರ ವಶದಲ್ಲಿದ್ದು ವಿಚಾರಣೆ ಮುಂದುವರೆದಿದೆ. ಇತ್ತ ಪತಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಶ್ರುತಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.