ಕಲಬುರಗಿ: ಆಳಂದ ಮತಗಳ್ಳತನ ಪ್ರಕರಣದಲ್ಲಿ SIT ತನಿಖೆ ಸ್ಫೋಟಕ ತಿರುವು ಪಡೆದಿದೆ. ₹80ಕ್ಕೆ ಒಂದು ವೋಟ್ ಡಿಲೀಟ್ ಮಾಡುತ್ತಿದ್ದ ಜಾಲ ಬಯಲಾಗಿದ್ದು, ಪ್ರಮುಖ ಆರೋಪಿ ದುಬೈಗೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಹೌದು 2023ರ ಆಳಂದ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿ ಹಗರಣದ ತನಿಖೆ ಚುರುಕುಗೊಂಡಿದೆ.
ಎಸ್‌ಐಟಿ ತನಿಖೆಯ ಪ್ರಕಾರ, ಪ್ರತಿ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು 80 ರೂ. ಲಂಚ ನೀಡಲಾಗಿದೆ. ಈ ಪ್ರಕರಣದಲ್ಲಿ ಆರು ಪ್ರಮುಖ ಶಂಕಿತರನ್ನು ಗುರುತಿಸಲಾಗಿದ್ದು, ವಿನೂತನ ವಿಒಐಪಿ ತಂತ್ರಜ್ಞಾನವನ್ನು ಬಳಸಿ ಅಕ್ರಮ ಎಸಗಲಾಗಿದೆ.
2023ರಲ್ಲಿ ಅಳಂದದಲ್ಲಿ ಮತಪಟ್ಟಿ ಹೆಸರು ತೆಗೆಯಲು 6,018 ಅರ್ಜಿಗಳ ಸಲ್ಲಿಕೆಯಾಗಿದ್ದವು. ಕಲಬುರಗಿ ಡೇಟಾ ಸೆಂಟರ್ನಿಂದ 75 ಮೊಬೈಲ್ ನಂಬರ್ಗಳನ್ನು ಬಳಸಿಕೊಂಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಡೇಟಾ ಸೆಂಟರ್ನವನು ಪ್ರತಿ ಅರ್ಜಿಗೂ 80 ರೂ.ನಂತೆ 4.8 ಲಕ್ಷ ರೂ. ಪಡೆದಿದ್ದ. ಅರ್ಜಿಗಳ ಸಲ್ಲಿಕೆಯಲ್ಲಿ ಸ್ಥಳೀಯ ಮೊಹಮ್ಮದ್ ಅಶ್ಫಾಕ್ ಭಾಗಿಯಾಗಿದ್ದ. ಸದ್ಯ ಪ್ರಮುಖ ಆರೋಪಿ ಮೊಹಮ್ಮದ್ ಅಶ್ಫಾಕ್ ಸೇರಿ ಮೂವರು ದುಬೈನಲ್ಲಿದ್ದು, ಅವರ ಬಂಧನದ ಬಳಿಕ ಮತ್ತಷ್ಟು ಸತ್ಯಾಸತ್ಯತೆ ಬಯಲಾಗಲಿದೆ.
ವಿಶೇಷ ತನಿಖಾ ತಂಡದ ತನಿಖೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಇದು ಬಿಜೆಪಿಯ ‘ಮತಗಳ್ಳತನ’ ಕಾರ್ಯಾಚರಣೆ ಎಂದು ಆರೋಪಿಸಿದ್ದಾರೆ.
“ಕೇವಲ 80 ರೂ.ಗಾಗಿ ಸುಮಾರು 6,000 ನೈಜ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗಿದೆ. ಬಿಜೆಪಿ ನಾಯಕರು ಮತ್ತು ಅವರ ಆಪ್ತರ ಕಡೆಗೆ ತನಿಖೆ ಬೊಟ್ಟು ಮಾಡುತ್ತಿದೆ. ಈ ಷಡ್ಯಂತ್ರದ ಹಿಂದಿರುವ ಪ್ರತಿಯೊಬ್ಬರನ್ನೂ ಜೈಲಿಗೆ ಕಳುಹಿಸುತ್ತೇವೆ,” ಎಂದು ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.



