ಧಾರವಾಡ ಕೆಐಎಡಿಬಿ ಅಕ್ರಮ ಕೇಸ್ ಗೆ ಟ್ವಿಸ್ಟ್: ಸಿಐಡಿ ಬೆನ್ನಲ್ಲೇ ಇಡಿ ಎಂಟ್ರಿ!

0
Spread the love

ಧಾರವಾಡ:- ಧಾರವಾಡ ಕೆಐಎಡಿಬಿ ಅಕ್ರಮ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸಿಐಡಿ ತನಿಖೆ ಬೆನ್ನಲ್ಲೇ ಇಡಿ ಎಂಟ್ರಿ ಕೊಟ್ಟಿದೆ.

Advertisement

ಇಂದು ಬೆಂಗಳೂರಿನಿಂದ ಆಗಮಿಸಿದ ಇಡಿ ಅಧಿಕಾರಿಗಳ ತಂಡ, ಕೆಐಎಡಿಬಿ ಕಚೇರಿಗೆ ದಾಳಿ ಮಾಡಿ ತನಿಖೆ ಆರಂಭಿಸಿದೆ.

ಧಾರವಾಡ ಕೆಐಎಡಿಬಿ ಕಚೇರಿ ಅಂದರೆ ಅಲ್ಲಿ ಅಕ್ರಮಗಳದ್ದೇ ಪಾರುಪತ್ಯ. ಕಳೆದ ವರ್ಷ ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವ್ಹಿ. ಡಿ. ಸಜ್ಜನ್ ತಮ್ಮ ನಿವೃತ್ತಿಯ ಕೊನೆಯ ದಿನವೇ 30 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ‌ಬಂದಿತ್ತು.

ಅದಕ್ಕೂ ಮುನ್ನ 20 ಕೋಟಿ ರೂ. ಡಬಲ್ ಪೇಮೆಂಟ್ ಹಗರಣವೂ ನಡೆದು, ಅದರಲ್ಲಿ ಸಜ್ಜನ್ ಮೊದಲನೇ ಆರೋಪಿ ಆಗಿ, ಜೈಲು ಕೂಡ ಕಂಡು ಬಂದಿದ್ದರು. ಡಬಲ್ ಪೇಮೆಂಟ್ ಕುರಿತು ಸಿಐಡಿ ತನಿಖೆಯ ಚಾರ್ಜ್ ಶೀಟ್​ನಲ್ಲಿ ಒಂದೇ ದಿನದಲ್ಲಿ 30 ಕೋಟಿ ರೂಪಾಯಿ ಹಣ ವರ್ಗಾವಣೆ ಬಗ್ಗೆ ಆರೋಪಿಸಲಾಗಿತ್ತು.

ಇದೇ ವೇಳೆ ಸಿಐಡಿ ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿವೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟಿದೆ. ಕೆಐಎಡಿಬಿ ಕಚೇರಿಗೆ ದಾಳಿ ಮಾಡಿ ತನಿಖೆ ಆರಂಭಿಸಿದೆ.

ಸರ್ಕಾರ ಹಾಗೂ ರೈತರ ನಡುವೆ ಕೆಲಸ ಮಾಡುವ ಇಲಾಖೆ ಇದಾಗಿದೆ. ರೈತರಿಂದ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಕೈಗಾರಿಕೆಗಳಿಗೆ ನೀಡಲಾಗುತ್ತದೆ. ಆದರೆ, ಇದನ್ನೇ ದಂಧೆ ಮಾಡಿಕೊಂಡ ಅಧಿಕಾರಿಗಳು ಹಾಗೂ ಏಜೆಂಟರು ನಿರಂತರವಾಗಿ ಹಣವನ್ನು ಲೂಟಿ ಮಾಡುತ್ತಲೇ ಬಂದಿದ್ದಾರೆ.

ಇನ್ನು ಇದೇ ವೇಳೆ ಬೆಂಗಳೂರಿನ ಖನಿಜ ಭವನದಲ್ಲಿರುವ ಕೆಐಎಡಿಬಿ ಕಚೇರಿಗೂ ದಾಳಿ ಮಾಡಿರುವ ಇಡಿ ತಂಡ, ಅಲ್ಲಿಯೂ ತನಿಖೆ ಶುರು ಮಾಡಿದೆ. ಈ ಇಲಾಖೆಯ ವಿಶೇಷ ಡಿಸಿ ದಯಾನಂದ ಅವರ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿ ಬಂದಿತ್ತು.

ಆದರೆ, ಸಿಐಡಿ ಆರೋಪಪಟ್ಟಿಯಲ್ಲಿ ಅವರ ಹೆಸರನ್ನು ಸೇರ್ಪಡೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಬಸವರಾಜ ಕೊರವರ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ದಾಳಿ ಮಾಡಿರೋ ಇಡಿ ಅಧಿಕಾರಿಗಳು ತನಿಖೆಯನ್ನು ಶುರು ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here