ಮಂಡ್ಯ: ಮಾಂತ್ರಿಕ ಶಕ್ತಿಯಿರುವ ಅದೃಷ್ಟದ ‘ರಾಮ–ಲಕ್ಷಣ’ ನಾಣ್ಯ ಎಂದು ನಂಬಿಸಿ ಸಾರ್ವಜನಿಕರಿಗೆ ವಂಚಿಸಲು ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ. ಹಳೆಯ ತಾಮ್ರದ ನಾಣ್ಯವನ್ನು ಮಾಂತ್ರಿಕ ನಾಣ್ಯವೆಂದು ಹೇಳಿ ಹಣ ಪಡೆದು ಪರಾರಿಯಾಗಲು ಯತ್ನಿಸಿದ್ದ ಇಬ್ಬರು ಯುವಕರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದ ಯಶ್ವಂತ್ ರಾವ್ ಹಾಗೂ ಸುಧೀರ್ ಎಂಬುವವರನ್ನು ಬಂಧಿಸಲಾಗಿದೆ. ಈ ಯುವಕರು ಮತ್ತೊಬ್ಬ ಸಹಚರನೊಂದಿಗೆ ಸೇರಿ ಅಮಾಯಕ ಜನರಿಗೆ ಮಾಂತ್ರಿಕ ಶಕ್ತಿಯುಳ್ಳ ನಾಣ್ಯ ಎಂದು ನಂಬಿಸಿ ವಂಚನೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ.
ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ್ದ ಆರೋಪಿಗಳು, ಒಂದು ಲಕ್ಷ ರೂಪಾಯಿಗೆ ನಾಣ್ಯ ಮಾರಾಟ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ನಾಣ್ಯ ಪಡೆಯಲು ಬೆಂಗಳೂರಿನ ವ್ಯಕ್ತಿ ನಾಗಮಂಗಲ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಆಗಮಿಸಿದ್ದರು.
ಈ ವೇಳೆ ಆರೋಪಿಗಳು ಮಾಂತ್ರಿಕ ನಾಣ್ಯವೆಂದು ಹಳೆಯ ತಾಮ್ರದ ನಾಣ್ಯವೊಂದನ್ನು ನೀಡಿ, ಒಂದು ಲಕ್ಷ ರೂಪಾಯಿ ಹಣ ಪಡೆದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ವಂಚನೆಗೆ ಒಳಗಾದುದನ್ನು ಅರಿತ ವ್ಯಕ್ತಿ ‘ಕಳ್ಳ ಕಳ್ಳ’ ಎಂದು ಕೂಗಿದ್ದಾರೆ. ವ್ಯಕ್ತಿಯ ಚೀರಾಟ ಕೇಳುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಚುರುಕಾಗಿ ಓಡುತ್ತಿದ್ದ ಆರೋಪಿಗಳನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ವಂಚನೆ ವಿಚಾರ ತಿಳಿದ ಸ್ಥಳೀಯರು ಆಕ್ರೋಶಗೊಂಡು ಇಬ್ಬರು ಆರೋಪಿಗಳಿಗೆ ಧರ್ಮದೇಟು ನೀಡಿದ್ದಾರೆ. ಆದರೆ ಗುಂಪಿನಲ್ಲಿದ್ದ ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಾಗಮಂಗಲ ಟೌನ್ ಪೊಲೀಸರು, ಸಾರ್ವಜನಿಕರ ವಶದಲ್ಲಿದ್ದ ಯಶ್ವಂತ್ ರಾವ್ ಹಾಗೂ ಸುಧೀರ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.



