ಬೆಂಗಳೂರು: ಅಕ್ರಮವಾಗಿ ರಕ್ತಚಂದನ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅಣ್ಯಮಯ್ಯ ಜಿಲ್ಲೆಯವರಾದ ವರಪ್ರಸಾದ್ ರೆಡ್ಡಿ ಹಾಗೂ ರಾಜ್‌ಶೇಖರ್ ಬಂಧಿತ ಆರೋಪಿಗಳಾಗಿದ್ದು, 60 ಲಕ್ಷ ಮೌಲ್ಯದ 1150 ಕೆಜಿ ರಕ್ತ ಚಂದನ ವಶಕ್ಕೆ ಪಡೆದಿದ್ದಾರೆ.
ಹುಳಿಮಾವಿನಲ್ಲಿ ಬಂಧಿತ ಆರೋಪಿಗಳಿಬ್ಬರು ಕಾರಿನ ಹಿಂಬದಿ ಸೀಟು ತೆಗೆದು, ಅದರ ಕೆಳಗೆ ರಕ್ತಚಂದನ ಜೋಡಿಸಿಟ್ಟಿದ್ದರು. ಇವುಗಳನ್ನು ಮಾರಾಟ ಮಾಡಲು ತಮಿಳುನಾಡಿಗೆ ಹೋಗುತ್ತಿದ್ದಾಗ ಹುಳಿಮಾವು ಪೊಲೀಸರು ಕಾರು ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದು, 60 ಲಕ್ಷ ಮೌಲ್ಯದ 1,150 ಕೆಜಿ ರಕ್ತಚಂದನ ಪತ್ತೆಯಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ಹುಳಿಮಾವು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



