ಮೈಸೂರು: ಗಡಿ ಭಾಗದ ಮೂಲಕ ಕೇರಳ ಲಾಟರಿ ಟಿಕೆಟ್‌ಗಳನ್ನು ರಾಜ್ಯಕ್ಕೆ ತರಿಸಿ ಪಿರಿಯಾಪಟ್ಟಣದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮೈಸೂರು ಜಿಲ್ಲಾ ಪೊಲೀಸರ ವಿಶೇಷ ತಂಡ ಭೇದಿಸಿದೆ. ಕಾನೂನು ಉಲ್ಲಂಘನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಟಿಕೆಟ್ ಹಾಗೂ ನಗದು ಜಪ್ತಿ ಮಾಡಲಾಗಿದೆ.
ವೆಂಕಟೇಶ್ವರ ವೇ ಬ್ರಿಡ್ಜ್ ಬಳಿ ಲಾಟರಿ ಮಾರಾಟ ನಡೆಸುತ್ತಿದ್ದ ಅರುಣ್ ಕುಮಾರ್ ಹಾಗೂ ಸಿಂಚನ ಹೋಟೆಲ್‌ನಲ್ಲಿ ವ್ಯವಹಾರ ನಡೆಸುತ್ತಿದ್ದ ಸ್ವಾಮಿ ಬಂಧಿತರಾಗಿದ್ದಾರೆ.
ಪೊಲೀಸರ ದಾಳಿಯಲ್ಲಿ ಒಟ್ಟು ₹55,200 ಮೌಲ್ಯದ ಕೇರಳ ರಾಜ್ಯ ಲಾಟರಿ ಟಿಕೆಟ್‌ಗಳು ಹಾಗೂ ₹22,930 ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ₹78,130 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕರ್ನಾಟಕದಲ್ಲಿ ಲಾಟರಿ ನಿಷೇಧಿತವಾಗಿದ್ದರೂ, ಗಡಿ ಮಾರ್ಗಗಳನ್ನು ಬಳಸಿಕೊಂಡು ಅಕ್ರಮ ವ್ಯವಹಾರ ನಡೆಯುತ್ತಿರುವುದು ಈ ದಾಳಿಯಿಂದ ಬಹಿರಂಗವಾಗಿದೆ. ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ಮಾರ್ಗದರ್ಶನದಲ್ಲಿ, ಅಡಿಷನಲ್ ಎಸ್‌ಪಿ ಮಲ್ಲಿಕ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಗಡಿ ಭಾಗದ ಅಕ್ರಮ ಜಾಲಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ.
ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.



