ವಿಜಯಸಾಕ್ಷಿ ಸುದ್ದಿ, ಗದಗ
ಬಿತ್ತನೆಗೆ ಹೆಸರು ಕಾಳು ಖರೀದಿಸಿ ಬೈಕಿನಲ್ಲಿ ಊರಿಗೆ ವಾಪಸು ಬರುತ್ತಿದ್ದಾಗ ಸಾರಿಗೆ ಸಂಸ್ಥೆಯ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ರೈತರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಕೊಪ್ಪಳ ರಸ್ತೆಯ ಹಳ್ಳಿಗುಡಿ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಹಳ್ಳಿಗುಡಿ ಗ್ರಾಮದ ಪರಸಪ್ಪ ಜೋಗಿನ (55) ಹಾಗೂ ಪೇಠಾಲೂರು ಗ್ರಾಮದ ಮಾರುತಿ ಎಂದು ಗುರುತಿಸಲಾಗಿದೆ.
ಬಿತ್ತನೆಗಾಗಿ ಹೆಸರು ಬೀಜ ತರಲು ಮುಂಡರಗಿ ಪಟ್ಟಣಕ್ಕೆ ಹೋಗಿದ್ದ ಇಬ್ಬರು ರೈತರು ವಾಪಾಸು ಹಳ್ಳಿಗುಡಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ದಾಟುವಾಗ ಈ ದುರ್ಘಟನೆ ಜರುಗಿದೆ.
ಬಸ್ ಕೊಪ್ಪಳದಿಂದ ಗದಗ ಕಡೆ ಬರುತ್ತಿತ್ತು ಎನ್ನಲಾಗಿದೆ.
ಬೈಕ್ ಬಸ್‌ನಡಿಯಲ್ಲಿ ಸಿಲುಕಿದ್ದು, ಇಬ್ಬರ ದೇಹದ ಮೇಲೆ ಹಾಯ್ದ ಪರಿಣಾಮವಾಗಿ ದೇಹ ನಜ್ಜುಗುಜ್ಜಾಗಿದೆ.
ಸುದ್ದಿ ತಿಳಿದ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.



