ವಿಜಯಸಾಕ್ಷಿ ಸುದ್ದಿ, ಗದಗ : ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್ ಹುಬ್ಬಳ್ಳಿ, ಗದಗ, ಬಾಗಲಕೋಟ, ಶಿವಮೊಗ್ಗ, ಮಹಿಳಾ ಸಂಘಟನೆಯ ವತಿಯಿಂದ ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಮಾಡುವ ಕುರಿತು ಉಡಾನ್ ಟ್ರೇಡ್ ಫೇರ್ ಕಾರ್ಯಕ್ರಮವನ್ನು ಜೂನ್ 10ರಂದು ಬೆಳಿಗ್ಗೆ 9 ಗಂಟೆಗೆ ನಗರದ ಹುಬ್ಬಳ್ಳಿ ರಸ್ತೆಯ ಮುಳಗುಂದ ನಾಕಾದಲ್ಲಿರುವ ಶ್ರೀ ವಿಠ್ಠಲರೂಢ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಪೂರ್ವಭಾವಿ ಸಭೆ ಶ್ರೀ ವಿಠ್ಠಲರೂಢ ಸಮುದಾಯ ಭವನದಲ್ಲಿ ಜರುಗಿತು. ಸಭೆಯಲ್ಲಿ ಕಾರ್ಯದರ್ಶಿಗಳಾದ ಇಂದಿರಾ ಬಾಗಮರ ಮಾತನಾಡಿ, ಮಹಿಳೆಯರಿಗಾಗಿ ಗುಡಿ ಕೈಗಾರಿಕೆ ಉತ್ತೇಜನಕ್ಕಾಗಿ ಮಹಿಳೆಯರು ಸ್ವತಃ ತಯಾರಿಸಿದ ಎಲ್ಲಾ ತರಹದ ವಸ್ತುಗಳ, ಆಹಾರ ಪದಾರ್ಥಗಳ ಅಂಗಡಿಗಳ ಪ್ರದರ್ಶನ ಏರ್ಪಡಿಸಲಾಗಿದೆ. ಈ ಪ್ರದರ್ಶನದಲ್ಲಿ ಸೀರೆಗಳು, ಪಾಶ್ಚಿಮಾತ್ಯ ಕಲೆಕ್ಷನ್, ಮನೆಯ ಅಲಂಕಾರ ವಸ್ತುಗಳು, ಬೇಕರಿ ಆಹಾರಗಳು ಸೇರಿದಂತೆ ವಿವಿಧ ಅಂಗಡಿಗಳು ಅಂದು ಸಾರ್ವಜನಿಕರಿಗೆ ಜೈನ ಸಮಾಜದ ಮಹಿಳೆಯರ 35 ಅಂಗಡಿಗಳು ಪ್ರದರ್ಶನಗೊಳ್ಳುವವು. ಟೂರ್ಸ್ & ಟ್ರಾವೆಲ್ಸ್ ಮಾಹಿತಿ ಕೇಂದ್ರವು ವಿವಿಧ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡಲಿದೆ ಎಂದು ತಿಳಿಸಿದರಲ್ಲದೆ, ಜಿಲ್ಲೆಯ ಸಾರ್ವಜನಿಕರು ಈ ಪ್ರದರ್ಶನದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಅಂದಿನ ಕಾರ್ಯಕ್ರಮವನ್ನು ಗದಗ ಜಿಲ್ಲಾಧಿಕಾರಿಗಳಾದ ವೈಶಾಲಿ ಎಂ.ಎಲ್ ಉದ್ಘಾಟಿಸುವರು. ಜೈನ ಸಮಾಜದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸ್ಟಾಲ್‌ಗಳು ಜೂನ್ 10ರಂದು ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸುವವು ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಸ್ವೀಟಿ ಬನ್ಸಾಲಿ, ಇಂದಿರಾ ಬಾಗಮರ, ಬಂಟಿ ಪಾಲರೇಚಾ, ಸೋನಲ್ ಗಡಿಯಾ, ಸಪ್ನಾ ಬಾಗಮಾರ, ಸೀಮಾ ಕೊಠಾರಿ, ಅಂಕಿತಾ ಜೈನ, ಪಿಂಕಿ ಜೀರವಾಲೆ, ಸಾರಿಕಾ, ಕವಿತಾ ಗಡಿಯಾ, ನಿರ್ಮಲ ಬಾಫಣಾ, ಸಂಗೀತಾ, ಪ್ರೀತಿ ಓಸ್ವಾಲ್ ಉಪಸ್ಥಿತರಿದ್ದರು.