ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆಗಮಿಸಿರುವ ಎಚ್.ಎನ್. ನಾಯಕ್ ಅವರು ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಅನೇಕ ಬದಲಾವಣೆಗೆ ನಾಂದಿ ಹಾಡುತ್ತಿದ್ದು, ತಾಲೂಕಿನಾದ್ಯಂತ ಸಂಚಾರ ಕೈಗೊಂಡು ಅನೇಕ ಶಾಲೆಗಳಿಗೆ ಅನಿರೀಕ್ಷಿತ ಬೇಟಿ ನೀಡುತ್ತಿದ್ದಾರೆ.
ಗುರುವಾರ ತಾಲೂಕಿನ ಯಲ್ಲಾಪೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಪ್ರಾರ್ಥನೆ ನಡೆಯುವ ವೇಳೆಗೆ ಬಿಇಓ ರವರು ತಮ್ಮ ತಂಡದೊಂದಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ದೈರ್ಯ, ಸ್ಥೈರ್ಯದ ಜೊತೆಗೆ ಪ್ರಾಮಾಣಿಕತೆ, ಹಿರಿಯರಿಗೆ ಗೌರವ ನೀಡುವ ಭಾವನೆ ಅವಶ್ಯವಾಗಿದೆ. ವಿದ್ಯಾರ್ಥಿ ಜೀವನ ಬಹು ಮುಖ್ಯವಾಗಿದ್ದು, ಇಲ್ಲಿ ಉತ್ತಮ ಬೆಂಬಲ ಪ್ರೋತ್ಸಾಹ ದೊರೆತರೆ ಅಂತಹ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ತಾವು ಬಾಲಕರಿದ್ದಾಗಲೇ ಮೂವರು ಸಹಪಾಠಿಗಳು ನೀರಿನಲ್ಲಿ ಮುಳಿಗಿದಾಗ ರಕ್ಷಣೆ ಮಾಡಿ ಶೌರ್ಯ ಪ್ರಶಸ್ತಿ ಪಡೆದ ಕ್ಷಣವನ್ನು ಸ್ಮರಿಸಿದರು.
ಸಾಧನೆಗೆ ಮಕ್ಕಳಲ್ಲಿ ಪ್ರಯತ್ನದ ಜೊತೆಗೆ ಪ್ರೋತ್ಸಾಹವೂ ಅಗತ್ಯವಾಗಿದೆ. ಯಲ್ಲಾಪೂರ ಶಾಲೆ ಗ್ರಾಮೀಣ ಭಾಗದಲ್ಲಿದ್ದರೂ ಉತ್ತಮ ಪರಿಸರವನ್ನು ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕ್ಷೇತ್ರದಾದ್ಯಂತ ಅನಿರೀಕ್ಷಿತವಾಗಿ ಯಾವುದೇ ಗ್ರಾಮದ ಶಾಲೆಗೆ ಭೇಟಿ ನೀಡಬಹುದಾಗಿದ್ದು, ಸಮಯಪಾಲನೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ತಂಡದಲ್ಲಿ ಎಚ್.ಎಸ್. ರಾಮನಗೌಡ್ರ. ಬಿ.ಎಸ್. ಭಜಂತ್ರಿ, ಎಂ.ಎಂ. ಹವಳದ, ವಿ.ಎಚ್. ದೀಪಾಳಿ, ಶಿವಾನಂದ ಅಸುಂಡಿ ಇದ್ದರು. ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಂ. ಮಲ್ಲಣ್ಣವರ, ಎಸ್.ಎಂ. ಸ್ಥಾವರಮಠ, ಎಂ.ಆಯ್. ಕಣಿಕೆ, ಎಸ್.ಎನ್. ಮಾಗಳದ, ಎಸ್.ಎಂ. ಹುಡೇದ, ಎಸ್.ಎಂ. ನಾಗರಕಟ್ಟಿ, ಎಸ್.ಆರ್. ಸ್ವಾದಿ, ಎಂ.ವಾಯ್. ಭೋವಿ, ಗಣೇಶ ಲಮಾಣಿ ಇದ್ದರು.