ಬೆಂಗಳೂರು: ಬೆಂಗಳೂರಿನಲ್ಲಿ ರೋಡ್ರೇಜ್ ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ಬದಲಿಗೆ ದಿನೇ ದಿನೇ ರೋಡ್ರೇಜ್ ಕೇಸ್ಗಳು ಹೆಚ್ಚುತ್ತಿವೆ. ಇದೀಗ ರೋಡ್ ರೇಜ್ ರೀತಿಯಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಕ್ಸಿಡೆಂಟ್ ರೀತಿಯಲ್ಲಿ ಬಿಂಬಿಸಿ ಕೊಲೆ ಮಾಡಲಾಗಿದ್ದು, ದರ್ಶನ್ ಎಂಬ ಯುವಕ ಮೃತಪಟ್ಟಿದ್ದಾನೆ. ವರುಣ್ ಎಂಬ ಮತ್ತೊಬ್ಬ ಯುವಕ ಗಾಯಗೊಂಡಿದ್ದಾನೆ.
ದರ್ಶನ್ ಮತ್ತು ವರುಣ್ ಇಬ್ಬರೂ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕಾರಿನ ಮಿರರ್‌ಗೆ ಟಚ್ ಆಗಿದೆ. ಈ ವೇಳೆ ಮಿರರ್ ಒಡೆದಿದ್ದು, ಕಾರಿನಲ್ಲಿದ್ದ ಮನೋಜ್ ಕುಮಾರ್ ಮತ್ತು ಆರತಿ ಶರ್ಮ ದಂಪತಿ ಕೋಪಗೊಂಡು, ಸುಮಾರು ಎರಡು ಕಿಲೋಮೀಟರ್‌ನಷ್ಟು ಹಿಂಬಾಲಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಕಾರು ಡಿಕ್ಕಿಯಾದ ರಭಸಕ್ಕೆ ದರ್ಶನ್ ಮತ್ತು ವರುಣ್ ಇಬ್ಬರೂ ರಸ್ತೆಗುರುಳಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ದರ್ಶನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಾಥಮಿಕವಾಗಿ ಅಪಘಾತ ಎಂದು ಜೆಪಿ ನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಮೊದಲು ಇಬ್ಬರಿಗೂ ಡಿಕ್ಕಿ ಹೊಡೆದ ನಂತರ ತಪ್ಪಿಸಿಕೊಂಡ ದಂಪತಿ, ಮತ್ತೆ ಯೂ ಟರ್ನ್ ತೆಗೆದುಕೊಂಡು ಬಂದು ಮತ್ತೊಮ್ಮೆ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಕೆಲ ಸಮಯದ ಬಳಿಕ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸ್ಥಳಕ್ಕೆ ಮರಳಿ ಕಾರಿನ ಬಿಡಿ ಭಾಗಗಳನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ. ಸದ್ಯ ಘಟನೆ ಬಳಿಕ ಸ್ಥಳದಿಂದ ಪಲಾಯನ ಮಾಡಿದ ದಂಪತಿಯನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.


