ವಿಜಯಸಾಕ್ಷಿ ಸುದ್ದಿ, ಗದಗ: ಎರಡು ವರ್ಷದ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯಾವುದೇ ಸಾಧನೆಯನ್ನು ಮಾಡದೇ ಮೇ. 20ರಂದು ಸಾಧನಾ ಸಮಾವೇಶ ಮಾಡಲು ಹೊರಟಿರುವುದು ಯಾವ ಪುರಷಾರ್ಥಕ್ಕಾಗಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಎಂ ಹಿರೇಮಠ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಚುನಾವಣೆಯ ಸಂದರ್ಭದಲ್ಲಿ ನೂರಾರು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ನಂತರ ಎಲ್ಲ ಮರೆತು ಕೇವಲ 5 ಗ್ಯಾರಂಟಿಗಳನ್ನು ಕೊಟ್ಟಿದ್ದನ್ನೇ ಕಳೆದ 2 ವರ್ಷದಿಂದ ಡಂಗೂರ ಬಾರಿಸುತ್ತಾ ಬಂದಿದ್ದಾರೆ. 5 ಗ್ಯಾರಂಟಿಗಳನ್ನು ಬಿಟ್ಟು ರಾಜ್ಯದಲ್ಲಿ ಬೇರೆ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಮಾರ್ಪಟ್ಟಿದೆ. ಅಲ್ಲಿ ನೌಕರರಿಗೆ ಸಂಬಳವನ್ನು ಕೂಡಾ ಕೊಡದಷ್ಟು ಹೀನ ಮಟ್ಟಕ್ಕೆ ಈ ಇಲಾಖೆ ಬಂದು ನಿಂತಿದೆ. ಶಿಕ್ಷಣ ಇಲಾಖೆಯು ಗಬ್ಬೆದ್ದು ಹೋಗಿದೆ. ರಾಜ್ಯದ ಗೃಹ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ.
ರಾಜ್ಯದಲ್ಲಿ ಈ ಸರ್ಕಾರ ಬಂದಾಗಿನಿAದ ಸ್ತಬ್ಧವಾಗಿರುವ ಅಭಿವೃದ್ಧಿ ಕಾರ್ಯಗಳು ಸಾಧನೆಯೇ, ಮುಡಾ ಹಗರಣ, ವಾಲ್ಮೀಕಿ ಹಗರಣ ಮುಂತಾದವು ಸಾಧನೆಗಳೇ, ಪರಿಶಿಷ್ಟ ಜಾತಿ ಅಭಿವೃದ್ಧಿಗೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗಳಿಗೆ ಹಣ ಬಳಸಿದ್ದು ಸಾಧನೆಯೇ, ಸತತವಾಗಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆಗುತ್ತಿರುವದು ಸಾಧನೆಯೇ ಎಂದವರು ಪ್ರಶ್ನಿಸಿದ್ದಾರೆ.
ಯಾವ ಪುರಷಾರ್ಥಕ್ಕಾಗಿ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಸೇರಿದಂತೆ ಸಹ ವಕ್ತಾರ ದತ್ತಣ್ಣ ಜೋಶಿ, ಮಾಧ್ಯಮ ಪ್ರಮುಖ ರಾಜು ಹೊಂಗಲ, ಸಹ ಪ್ರಮುಖ ಶ್ರೀನಿವಾಸ ಹುಬ್ಬಳ್ಳಿ, ಶಹರ ಅಧ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಅಧ್ಯಕ್ಷ ಬೂದಪ್ಪ ಹಳ್ಳಿ ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.


