ಶೀಘ್ರವೇ ಬಾಕಿಯಿರುವ ಪ್ರಕರಣಗಳ ಇತ್ಯರ್ಥ

0
Upalokayukta Justice Press conference by K.N. Phanindra
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಲೋಕಾಯುಕ್ತ ಸಂಸ್ಥೆಯಲ್ಲಿ ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ಈಗಾಗಲೇ ನೋಂದಣಿಯಾಗಿವೆ. ಅವುಗಳಲ್ಲಿ 40 ಪ್ರಕರಣಗಳನ್ನು ಆಯ್ಕೆ ಮಾಡಿಕೊಂಡು ಅಂತಿಮ ತೀರ್ಮಾನ ಕೈಗೊಳ್ಳಲು ವಿಚಾರಣೆ ನಡೆಸಲಾಗಿ, 22 ದೂರಿನ ಪ್ರಕರಣಗಳ ತೀರ್ಮಾನ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.

Advertisement

ಗದಗ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 40 ಪ್ರಕರಣಗಳಲ್ಲಿ ಉಳಿದ ಪ್ರಕರಣಗಳನ್ನು ಶೀಘ್ರದಲ್ಲಿಯೇ ಹೆಚ್ಚಿನ ತನಿಖೆ ನಡೆಸಿ ಅಂತಿಮಗೊಳಿಸಲಾಗುವುದು ಎಂದರು.

Upalokayukta Justice  Press conference by K.N. Phanindra

ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಸಾರ್ವಜನಿಕರಿಂದ 113 ದೂರು/ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ ಕೆಲವು ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳು ಸೇರಿವೆ. ಸಾರ್ವಜನಿಕರ ಹಲವಾರು ದೂರುಗಳನ್ನು ಸ್ವೀಕರಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಿ ಸಮಯಾವಕಾಶ ನಿಗದಿಪಡಿಸಿ, ಇತ್ಯರ್ಥಪಡಿಸಿ ಲೋಕಾಯುಕ್ತ ಸಂಸ್ಥೆಗೆ ವರದಿ ನೀಡಲು ಸೂಚಿಸಲಾಗಿದೆ. ನಿಗದಿಪಡಿಸಿದ ಸಮಯಾವಕಾಶದೊಳಗೆ ಸಮಸ್ಯೆ ಇತ್ಯರ್ಥಪಡಿಸದೇ ಇದ್ದಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ದೂರು ಸ್ವೀಕಾರವಾದ ತಕ್ಷಣ ಪ್ರಾಥಮಿಕ ವರದಿ ತರಿಸಿಕೊಂಡು ಎದುರುದಾರರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ನೋಟೀಸ್ ಜಾರಿಗೊಳಿಸುವ ಮೂಲಕ ವಿಚಾರಣೆ ನಡೆಸಲಾಗುವುದು. ಅಧಿಕಾರಿಗಳು ಕರ್ತವ್ಯ ಲೋಪಕ್ಕೆ ಆಸ್ಪದ ನೀಡದಂತೆ ಕೆಲವು ಪ್ರಕರಣಗಳಲ್ಲಿ ಸೂಚನೆ ನೀಡಲಾಗಿದೆ. ಹಲವು ಅಧಿಕಾರಿಗಳಿಗೆ ತಪ್ಪು ಮರುಕಳಿಸಬಾರದೆಂದು ಎಚ್ಚರಿಕೆ ನೀಡಲಾಗಿದೆ. ತಪ್ಪು ತಿದ್ದಿಕೊಳ್ಳದಿದ್ದಲ್ಲಿ ಶಿಸ್ತು ಕ್ರಮ ಅನಿವಾರ್ಯವೆಂದು ತಿಳಿಸಲಾಗಿದೆ ಎಂದರು.

ಈವರೆಗೆ ಒಟ್ಟು 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಹಲವಾರು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಕೆಲವು ಪ್ರಕರಣಗಳಿಗೆ ವಿಚಾರಣೆ ನಡೆಸಿ ತೀರ್ಮಾನವನ್ನು ಕೈಗೊಳ್ಳುವ ಮೂಲಕ ಜನಸಾಮಾನ್ಯರ ವಿಶ್ವಾಸಾರ್ಹತೆ ಗಳಿಸುವಲ್ಲಿ ಲೋಕಾಯುಕ್ತ ಸಂಸ್ಥೆ ಮಹತ್ವ ಪಡೆದಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಸಂಪನ್ಮೂಲ ವ್ಯಕ್ತಿ ಪ್ರಕಾಶ ನಾಡಗೇರ, ಉಪನಿಬಂಧಕರಾದ ಅಮರನಾರಾಯಣ ಕೆ., ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ ಪಿಎಂ ಪಾಟೀಲ, ಗದಗ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ, ಡಿವೈಎಸ್ಪಿ ವಿಜಯ ಬಿರಾದಾರ ಉಪಸ್ಥಿತರಿದ್ದರು.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಉಪಲೋಕಾಯುಕ್ತರಾಗಿ ನಾನು ಕಳೆದ ಎರಡು ವರ್ಷ ಮೂರು ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಲೋಕಾಯುಕ್ತ ಸಂಸ್ಥೆಯಲ್ಲಿ 18 ಸಾವಿರಕ್ಕೂ ಅಧಿಕ ಪ್ರಕರಣಗಳು ನೋಂದಣಿಯಾಗಿ ವಿವಿಧ ಹಂತದ ತನಿಖೆಯಲ್ಲಿವೆ. ಸಂಸ್ಥೆಯಲ್ಲಿ ಶೇ 60ರಷ್ಟು ಅಧಿಕಾರಿ/ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಉಪಲೋಕಾಯುಕ್ತರ ಇನ್ನೊಂದು ಹುದ್ದೆ ಖಾಲಿ ಇದೆ ಎಂದರು.

 


Spread the love

LEAVE A REPLY

Please enter your comment!
Please enter your name here