ಟೆಹ್ರಾನ್: ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸುವಂತೆ ಹಿಂದೆ ಒತ್ತಡ ಹೇರಿದ್ದ ಅಮೆರಿಕ ಈಗ ಭಾರತ ಸೇರಿದಂತೆ ಜಗತ್ತಿನ ದೇಶಗಳಿಗೆ ರಷ್ಯಾದಿಂದ ತೈಲ ಖರೀದಿಸಲು ಮನವಿ ಮಾಡುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಟೀಕಿಸಿದ್ದಾರೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಅಮೆರಿಕ ಒಂದು ತಿಂಗಳ ಕಾಲ ಜಗತ್ತಿನ ರಾಷ್ಟ್ರಗಳಿಗೆ ಬೆದರಿಕೆ ಹಾಕಿತ್ತು ಎಂದು ಹೇಳಿದ್ದಾರೆ. ಆದರೆ ಇರಾನ್ ಜೊತೆ ನಡೆದ ಎರಡು ವಾರಗಳ ಯುದ್ಧದ ನಂತರ ಅಮೆರಿಕ ತನ್ನ ನಿಲುವು ಬದಲಿಸಿ ಭಾರತ ಸೇರಿದಂತೆ ಹಲವು ದೇಶಗಳಿಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.
ಇರಾನ್ ಮೇಲೆ ನಡೆಯುತ್ತಿರುವ ಅಕ್ರಮ ಯುದ್ಧಕ್ಕೆ ಯುರೋಪ್ ಬೆಂಬಲ ನೀಡುತ್ತಿರುವುದಾಗಿ ಹೇಳಿದ ಅವರು, ರಷ್ಯಾ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಬೆಂಬಲ ಪಡೆಯುವ ಉದ್ದೇಶದಿಂದ ಯುರೋಪ್ ಈ ರೀತಿಯ ನಿಲುವು ತಾಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಶೋಚನೀಯ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆ ಹಲವು ತಿಂಗಳಿಂದ ನಡೆಯುತ್ತಿದ್ದರೂ ಅಂತಿಮವಾಗಿರಲಿಲ್ಲ. ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು.
ಆದರೆ ಕಳೆದ ವಾರ ಅಮೆರಿಕ, ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲ ಅನುಮತಿ ನೀಡಿರುವುದಾಗಿ ತಿಳಿಸಿತ್ತು. ಈಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದಿಂದ ಯಾವುದೇ ದೇಶಗಳು ತೈಲ ಖರೀದಿಸಬಹುದು ಎಂದು ಅಮೆರಿಕ ಹೇಳಿರುವುದಾಗಿ ವರದಿಯಾಗಿದೆ.



