ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯಾದ್ಯಂತ ಬರದ ಛಾಯೆಯಿದ್ದು, ಗದಗ ಜಿಲ್ಲೆಯಲ್ಲಿಯೂ ಕುಡಿಯುವ ನೀರಿನ ಸ್ಥಿತಿ ಚಿಂತಾಜನಕವಾಗಿದೆ. ನದಿ ಪಾತ್ರದಲ್ಲಿಯೂ ನೀರಿನ ಅಭಾವ ತಲೆದೋರಿದೆ. ಇಂತಹ ಸಂದಿಗ್ಧ ಸ್ಥಿತಿಯನ್ನರಿತು ಸಾರ್ವಜನಿಕರು ನೀರನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಭದ್ರಾ ಜಲಾಶಯದಲ್ಲಿಯೂ ಕೇವಲ 8 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಈ ಹಿಂದೆ ನೀರು ಬಿಡುವಂತೆ ಕೋರಿದಾಗ ಹಮ್ಮಿಗಿ ಬ್ಯಾರೇಜಿಗೆ 0.4 ಟಿಎಂಸಿ ಮಾತ್ರ ಬಂದಿತ್ತು.
ಹೀಗಾಗಿ ಸದ್ಯ ಲಭ್ಯವಿರುವ ಡೆಡ್ ಸ್ಟೋರೇಜ್‌ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನೀರಿನ ಲಭ್ಯತೆ ಕಡಿಮೆ ಇರುವ ಕಾರಣ ಭದ್ರಾ ಡ್ಯಾಂನಿಂದ ನೀರು ಬಿಡುವಂತೆ ವಿನಂತಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಮಾಡಲಾಗಿದ್ದು, ಮತ್ತೊಮ್ಮೆ ಮುಖ್ಯಮಂತ್ರಿಗಳ ಸಂಪರ್ಕ ಮಾಡಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗದಗ-ಬೆಟಗೇರಿ ಅವಳಿ ನಗರಕ್ಕೆ ಮಾತ್ರವಲ್ಲದೆ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿಯೂ ನೀರಿನ ಸಮಸ್ಯೆ ಎಲ್ಲೆ ಮೀರಿದೆ. ಡಿಪಿಒಟಿ ಮೂಲಕ ನೀರು ಪೂರೈಕೆಯ ವ್ಯವಸ್ಥೆ ಸರಿಯಾಗಿ ನಡೆದಿತ್ತು. ಆದರೆ, ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗಕ್ಕೂ ನೀರು ಸಮರ್ಪಕವಾಗಿ ತಲುಪುತ್ತಿಲ್ಲ. ಈ ಬಗ್ಗೆ ಹಮ್ಮಿಗಿ ಬ್ಯಾರೇಜ್‌ಗೆ ಭೇಟಿ ನೀಡಿ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಚುನಾವಣೆ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಯಾವುದೇ ದೂರು ದಾಖಲಾಗದಂತೆ ಚುನಾವಣೆ ನಡೆದಿದೆ. ಅದಕ್ಕೆ ಕಾರಣರಾದ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯವರಿಗೆ ಸಚಿವರು ಧನ್ಯವಾದಗಳನ್ನು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವಾಸಣ್ಣ ಕುರುಡಗಿ, ಬಿ.ಬಿ. ಅಸೂಟಿ, ಗುರಣ್ಣ ಬಳಗಾನೂರ, ಅಶೋಕ ಮಂದಾಲಿ, ಎಸ್.ಎನ್. ಬಳ್ಳಾರಿ, ಉಮರ್ ಫಾರೂಕ್ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನದಲ್ಲಿ ಭಾಗಿಯಾಗಿದ್ದಾರೆ. ಯಾವುದೇ ಪಕ್ಷದ ಕಾರ್ಯಕರ್ತರು ಮತದಾನಕ್ಕೆ ಆಹ್ವಾನ ನೀಡುವುದಕ್ಕಿಂತ ಮುಂಚೆಯೇ ಸ್ವಯಂಪ್ರೇರಿತರಾಗಿ ಮತದಾನ ಮಾಡಿರುವುದು ಮತದಾರರು ಜಾಗೃತರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಚುನಾವಣೆ ಗ್ಯಾರಂಟಿ ಯೋಜನೆಗಳ ಜನಾಭಿಪ್ರಾಯ ಸಂಗ್ರಹದ ಚುನಾವಣೆಯಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.