ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಅರಕ್ಷಿತ ಸ್ಮಾರಕಗಳ ಸಂರಕ್ಷಣೆ ಕಾಮಗಾರಿಯು ಆರಂಭವಾಗಿ ವೇಗ ಪಡೆದುಕೊಂಡಿದ್ದು, ವಿವಿಧ ಗಲ್ಲಿಗಳಲ್ಲಿರುವ 13 ಸ್ಮಾರಕಗಳ ಕಾಮಗಾರಿಯು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಂಡು ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ ತಿಳಿಸಿದರು.
ಅರಕ್ಷಿತ ಸ್ಮಾರಕಗಳ ಕಾಮಗಾರಿ ನಡೆದ ಸ್ಥಳ ವೀಕ್ಷಣೆ ಮಾಡಿ ಮಾತನಾಡಿದ ಅವರು, ಕಳೆದ ಸೆ.8ರಂದು ಸ್ಮಾರಕಗಳ ಸಂರಕ್ಷಣೆ ಕಾಮಗಾರಿಗೆ 5 ಕೋಟಿ ರೂ ವೆಚ್ಚದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಚಾಲನೆ ನೀಡಿದರು. ಗ್ರಾಮದ ಹಾಲಗೊಂಡ ಬಸವೇಶ್ವರ ದೇವಸ್ಥಾನದ ಹತ್ತಿರವಿರುವ ಮಜ್ಜನಭಾವಿ ಸಂರಕ್ಷಣಾ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಯಿತು. ನಂತರ ಕಲ್ಮಠ, ಕಣ್ಣೀರ ಭಾವಿ, ಮಲ್ಲಿಕಾರ್ಜುನ, ಲೆಕ್ಕದ ವೀರೇಶ್ವರ, ಈಶ್ವರ ಗುಡಿ, ನೀಲಕಂಠೇಶ್ವರ ಸಂರಕ್ಷಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಶೇ.30ರಷ್ಟು ಕಾಮಗಾರಿ ನಡೆದಿದೆ.
ಮೂಲವಾಗಿ ನಿರ್ಮಾಣವಾಗಿರುವ ಕಲಾಕೃತಿಗಳಿಗೆ ಯಾವುದೇ ಧಕ್ಕೆ ಬಾರದಂತೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಕಲ್ಯಾಣಿಗಳಲ್ಲಿ ಮಲಿನಗೊಂಡಿರುವ ನೀರನ್ನು ಹೊರ ಹಾಕಿ ಪ್ರವಾಸಿಗರಿಗೆ ಆಕರ್ಷಣೀಯವಾಗಿ ಕಾಣುವಂತೆ ಮಾಡಲಾಗುತ್ತಿದ್ದು, ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇನ್ನೂ ವಿಶೇಷವಾಗಿ ಬ್ರಹ್ಮ ಜಿನಾಲಯ ಹತ್ತಿರದ ಪ್ರಾಚ್ಯ ವಸ್ತು ಸಂಗ್ರಾಲಯದ ಮುಂದೆ ಇರುವ ಕಣ್ಣೀರ ಭಾವಿ(ಕಲ್ಯಾಣಿ)ಅಭಿವೃದ್ಧಿಗಾಗಿ ಈಗ ಮಂಜೂರು ಆಗಿರುವ ಅನುದಾನದ ಜತೆಗೆ ಇನ್ನೂ 1.5 ಕೋಟಿ ರೂ. ವಿಶೇಷ ಅನುದಾನವನ್ನು ಮೈಸೂರು ಪುರಾತತ್ವ ಇಲಾಖೆಯಿಂದ ಮಂಜೂರು ಮಾಡಿಸಲು ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ ಅವರಿಗೆ ವಿನಂತಿಸಲಾಗಿದೆ.
ಗ್ರಾಮದಲ್ಲಿ ಐತಿಹಾಸಿಕವಾದ ಕೋಟೆ ಗೋಡೆಗಳು ಸಹ ಇದ್ದು, ಅವುಗಳನ್ನು ಸಂರಕ್ಷಣೆ ಮಾಡುವ ಉದ್ದೇಶವನ್ನು ರಾಜ್ಯ ಪುರಾತತ್ವ ಇಲಾಖೆ ಹೊಂದಿದ್ದು, ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಸಿದ್ಧಲಿಂಗೇಶ್ವರ ಪಾಟೀಲ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ, ಧಾರವಾಡದ ಪುರಾತತ್ವ ಸಂಗ್ರಾಲಯಗಳು ಮತ್ತು ಪರಂಪರೆಯ ಇಂಜಿನಿಯರ್ ವಿಭಾಗದ ಪುರಾತತ್ವ ಸಂರಕ್ಷಣಾ ಸಹಾಯಕಿ ಸುವರ್ಣ ಕ್ಷೀರಸಾಗರ, ಪ್ರಾಧಿಕಾರದ ಸದಸ್ಯ ಅ.ದ. ಕಟ್ಟಿಮನಿ ಇದ್ದರು.
ಖ್ಯಾತ ಇತಿಹಾಸ ತಜ್ಞರಾದ ಗೀತಾಂಜಲಿರಾವ್ ಅವರ ನೇತೃತ್ವದಲ್ಲಿ ಲಕ್ಕುಂಡಿಯ ಸಮಗ್ರ ಸ್ಮಾರಕಗಳ ಅಭಿವೃದ್ಧಿಯ ಬಗ್ಗೆ ಕೆಲವೇ ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರೆ. ವರದಿಯ ಆಧಾರದ ಮೇಲೆ ಹಂತ ಹಂತವಾಗಿ ಲಕ್ಕುಂಡಿ ಗ್ರಾಮವು ವಿಶ್ವ ಪಾರಂಪರಿಕ ಪಟ್ಟಿಯ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು.
– ಸಿದ್ಧಲಿಂಗೇಶ್ವರ ಪಾಟೀಲ.
ಲಕ್ಕುಂಡಿ ಪಾರಂಪರಿಕ ಪ್ರದೇಶ
ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ.