ವಿಜಯಸಾಕ್ಷಿ ಸುದ್ದಿ, ರೋಣ
ಮನೆಯಲ್ಲಿರುವ ಎಲ್ಲ ಸಾಮಾನು ಹಳ್ಳಕ್ಕೆ ತೇಲಿ ಹೋದ ಮೆಲೆ ಪರಿಹಾರ ಕೊಡುವುದರಲ್ಲಿ ಅರ್ಥವಿಲ್ಲ. ನಾನು ಕ್ಷೇತ್ರದ ಗ್ರಾಮಗಳಲ್ಲಿ ಸಂಚರಿಸಿ ಜನರ ಕಷ್ಟಗಳನ್ನು ಆಲಿಸಿದ್ದೇನೆ. ಹೀಗಾಗಿ ಸರಕಾರದ ನಿರ್ದೇಶನದ ಜೊತೆಗೆ ಮಾನವೀಯತೆ ಕೂಡ ಇರಬೇಕು ಎಂದು ಶಾಸಕ ಕಳಕಪ್ಪ ಬಂಡಿ ಅವರು ತಹಸೀಲ್ದಾರ್ ವಾಣಿ ಉಂಕಿಯವರಿಗೆ ಸೂಚಿಸಿದ ಘಟನೆ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ನಡೆಯಿತು.
ಅವರು ಸೋಮವಾರ ಹಿರೇಹಾಳ ಗ್ರಾಮಕ್ಕೆ ಭೇಟಿ ನೀಡಿ ಮಳೆಗೆ ಬಿದ್ದ ಮನೆಗಳನ್ನು ವೀಕ್ಷಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುವ ಮೂಲಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸತತ ಮಳೆಗೆ ಮನೆಗಳಿಗೆ ನೀರು ಹೊಕ್ಕು ದವಸ ಧಾನ್ಯಗಳು ನೀರು ಪಾಲಾಗಿವೆ. ಇದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಹೀಗಾಗಿ ಅವರಿಗೂ ಸಹ ಪರಿಹಾರ ವಿತರಿಸಬೇಕು ಎಂದರು. ಇದಕ್ಕೆ ತಹಸೀಲ್ದಾರ್ ವಾಣಿ ಉಂಕಿಯವರು ಸರಕಾರದ ನಿರ್ದೇಶನದ ಮೇರೆಗೆ ಹಾಗೆ ವಿತರಣೆ ಮಾಡಲು ಬರುವುದಿಲ್ಲ. ಅಲ್ಲದೆ ಮನೆಯಲ್ಲಿದ್ದ ವಸ್ತುಗಳು ಹಳ್ಳಕ್ಕೆ ತೇಲಿ ಹೋದರೆ ಮಾತ್ರ ಪರಿಹಾರ ವಿತರಣೆ ಮಾಡಬಹುದು ಎಂಬ ನಿಯಮವಿದೆ ಎನ್ನುತ್ತಿದ್ದಂತೆ ಶಾಸಕರು ಈಗಾಗಲೇ ತಿನ್ನುವ ಆಹಾರ ಹಾಗೂ ಉಡುವ ಬಟ್ಟೆ ನೀರಲ್ಲಿ ಮುಳುಗಿ ಹೋಗಿದೆ. ಇಲ್ಲಿ ನಿಯಮಾವಳಿಯ ಜೊತೆಗೆ ಮಾನವೀಯತೆ ಕೂಡ ಪಾಲನೆ ಆಗಬೇಕು. ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಲಾಗುವುದು ಎಂದರು.
ಇನ್ನು ಮಳೆಗೆ ಬಿದ್ದಿರುವ ಮನೆಗಳಿಗೆ ಕೇವಲ ೩೨೦೦ ರೂ. ನೀಡಲಾಗುತ್ತಿದೆ ಎಂದು ಸಂತ್ರಸ್ತರು ಶಾಸಕರ ಬಳಿ ದೂರಿದರು. ಆಗ ತಹಸೀಲ್ದಾರ್ ವಾಣಿ ಉಂಕಿಯವರು ಸರಕಾರದ ನಿರ್ದೇಶನ ಬರುವ ಮೊದಲು ಕುಸಿದ ಮನೆಗಳಿಗೆ ಹಾಗೂ ಆಗಿನ ನಿಯಮಾವಳಿ ಪ್ರಕಾರ ೩೨೦೦ ರೂ. ಸಂತ್ರಸ್ತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದಾಗ, ಶಾಸಕರು ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಅವರಿಗೂ ಸಹ ನ್ಯಾಯ ಒದಗಿಸುವ ಕೆಲಸ ಮಾಡಿ ಎಂದು ತಹಸೀಲ್ದಾರ್‌ರವರಿಗೆ ಸೂಚಿಸಿದರು.
ಅಲ್ಲದೆ ಈಗಾಗಲೇ ಕೆಲ ಸಂತ್ರಸ್ತರಿಗೆ ಹಣ ಜಮಾ ಆಗಿದೆ ಎಂದು ಇಲಾಖೆಯ ದಾಖಲೆಗಳು ತೋರಿಸುತ್ತವೆ. ವಿಪರ್ಯಾಸ ಅಂದರೆ ಸಂತ್ರಸ್ತರ ಖಾತೆಗಳಿಗೆ ಪರಿಹಾರ ಮೊತ್ತ ಜಮಾ ಆಗಿಲ್ಲ. ಹೀಗಾಗಿ ಈ ಕುರಿತು ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಶಾಸಕರು ತಹಸೀಲ್ದಾರರಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರರು ಈ ಪ್ರಕರಣ ಈ ಹಿಂದೆ ನಡೆದಿದ್ದು ನಾನು ಬಂದಾಗ ಆಗಿಲ್ಲವಾದರೂ ಸಹ ನಿಮ್ಮ ಸಲಹೆಯಂತೆ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.
ಸೆ. 9 ರಂದು ಹಿರೇಹಾಳ ಗ್ರಾಮದಲ್ಲಿ ಸತತ ಮಳೆಯಿಂದ ಮನೆ ಬಿದ್ದ ಪರಿಣಾಮ ಗ್ರಾಮದ ಲಕ್ಷ್ಮವ್ವ ಮಾದರ [೮೦] ಎಂಬ ವೃದ್ಧೆ ಸ್ಥಳದಲ್ಲಿ ಮೃತಪಟ್ಟಿದ್ದಳು. ಶಾಸಕ ಕಳಕಪ್ಪ ಬಂಡಿಯವರು ಮೃತ ಕುಟುಂಬದ ಸದಸ್ಯರಿಗೆ ೫ ಲಕ್ಷ ರೂ. ಗಳ ಪರಿಹಾರದ ಮೊತ್ತದ ಚೆಕ್‌ನ್ನು ವಿತರಿಸುವ ಮೂಲಕ ಸಾಂತ್ವನ ಹೇಳಿದರು. ಅಲ್ಲದೆ ಬಿದ್ದಿರುವ ಮನೆಗೆ ಅಗತ್ಯ ನೆರವು ನೀಡಲು ತಹಸೀಲ್ದಾರರಿಗೆ ಸೂಚಿಸಿದರು.
ಉಪತಹಸೀಲ್ದಾರ್ ಜೆ.ಟಿ.ಕೊಪ್ಪದ, ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಜಿಪಂ ಮಾಜಿ ಸದಸ್ಯ ಶಿವಕುಮಾರ ನೀಲಗುಂದ, ಗ್ರಾಪಂ ಸದಸ್ಯರು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.