ಮೆಕ್ಯಾನಿಕ್, ಗ್ರಾಮ ಪಂಚಾಯತಿ ಸಿಬ್ಬಂದಿ ಸಾವು
ವಿಜಯಸಾಕ್ಷಿ ಸುದ್ದಿ, ಮುಂಡರಗಿ/ಶಿರಹಟ್ಟಿ
ಮುಂಡರಗಿ ಪಟ್ಟಣದಲ್ಲಿ ಗ್ಯಾರೇಜ್ ನಲ್ಲಿ ರಿಪೇರಿಗೆ ಬಿಟ್ಟಿದ್ದ ಟಿಪ್ಪರ ಹಾಯ್ದು ಮೆಕ್ಯಾನಿಕ್ ಮೃತಪಟ್ಟರೆ, ಶಿರಹಟ್ಟಿ ತಾಲೂಕಿನ ಯತ್ನಳ್ಳಿ ಕಸ ವಿಲೇವಾರಿ ಘಟಕದಲ್ಲಿ ಟಾಟಾ ಏಸ್ ಡಿಕ್ಕಿಯಾಗಿ ಗ್ರಾಮ ಪಂಚಾಯತಿಯ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಶಿರಹಟ್ಟಿ ತಾಲೂಕಿನ ಮಾಡೊಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಕಸ ವಿಲೇವಾರಿ ವಾಹನವೊಂದು ಕಸ ತುಂಬಿಕೊಂಡು ಯತ್ನಳ್ಳಿ ಬಳಿ ಇರುವ ಕಸ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡುವ ವೇಳೆ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಗ್ರಾಮ ಪಂಚಾಯತಿ ಸಿಬ್ಬಂದಿಯಾದ ಚನ್ನಬಸವ್ವ ನಿಂಗಪ್ಪ ಗಡಿಯಣ್ಣವರ (39) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಮಹಿಳೆ ಮೃತಪಟ್ಟಿದ್ದಾಳೆ. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಗ್ಯಾರೇಜ್ ನಲ್ಲಿ ನಿಲ್ಲಿಸಿದ ಟಿಪ್ಪರ ವಾಹನದ ಹಿಂದಿನ ಗಾಲಿಯ ಏರ್ ಬಿಡುವಾಗ ಟಿಪ್ಪರ ಚಾಲಕ ಏಕಾಏಕಿ ವಾಹನ ಚಲಾಯಿಸಿದ ಪರಿಣಾಮವಾಗಿ ಮೆಕ್ಯಾನಿಕ್ ಮುನ್ನಾಸಾಬ್ ಗಪಾರಸಾಬ ಪಾಮಡಿ (40) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.