HomeGadag Newsಮಾರಕಾಸ್ತ್ರ ಬಳಕೆ ತಡೆಗೆ ರೌಡಿ ಸ್ಕ್ವಾಡ್; 6 ಜನರ ಗಡಿಪಾರಿಗೆ ಶಿಪಾರಸು, 12 ಜನರ ವಿರುದ್ಧ...

ಮಾರಕಾಸ್ತ್ರ ಬಳಕೆ ತಡೆಗೆ ರೌಡಿ ಸ್ಕ್ವಾಡ್; 6 ಜನರ ಗಡಿಪಾರಿಗೆ ಶಿಪಾರಸು, 12 ಜನರ ವಿರುದ್ಧ ಕೇಸ್-ಎಸ್ಪಿ ಶಿವಪ್ರಕಾಶ್

Spread the love

ಹೆಚ್ಚುತ್ತಿರುವ ಚಾಕು ಇರಿತದ ಪ್ರಕರಣ; ತಡೆಗಟ್ಟಲು ಪೊಲೀಸ್ ಇಲಾಖೆ ಸಜ್ಜು- ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ

ವಿಜಯಸಾಕ್ಷಿ ಸುದ್ದಿ, ಗದಗ

ಚಾಕು ಇರಿತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರತ್ಯೇಕವಾದ ರೌಡಿ ಸ್ಕ್ವಾಡ್ ರಚನೆ ಮಾಡಲಾಗುವುದು. ಅವಳಿ ನಗರದಲ್ಲಿ ಮಾರಕಾಸ್ತ್ರಗಳು ಇಲ್ಲ ಎನ್ನುವುದು ಖಚಿತವಾಗುವ ವರೆಗೂ ಈ ಸ್ಕ್ವಾಡ್ ನಿರಂತರವಾಗಿ ಕೆಲಸ ನಿರ್ವಹಿಸಲಿದೆ. ನೇರವಾಗಿ ನನ್ನ ಮಾರ್ಗದರ್ಶನದಲ್ಲಿಯೇ ಈ ಸ್ಕ್ವಾಡ್ ಕಾರ್ಯ ನಿರ್ವಹಿಸಲಿದೆ. ಅಂದಾಜು ಮೂರರಿಂದ ನಾಲ್ಕು ತಿಂಗಳು ಈ ಸ್ಕ್ವಾಡ್ ಕೆಲಸ ಮಾಡಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದರು.

ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಗದಗ ಬೆಟಗೇರಿ ಅವಳಿ ನಗರದಲ್ಲಿ ವಾರದಲ್ಲಿ ಎರಡು ಚಾಕು ಇರಿತ ಪ್ರಕರಣಗಳು ಸಂಭವಿಸಿದ್ದರಿಂದ ಶುಕ್ರವಾರ ದಿಢೀರ್ ತಪಾಸಣೆ ಕೈಗೊಂಡು ಮಾರಕಾಸ್ತ್ರ ಹೊಂದಿರುವ ಸಂಶಯಾಸ್ಪದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದರು.

ಅವಳಿ ನಗರದಲ್ಲಿ ಚಾಕು ಇರಿತ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎರಡ್ಮೂರು ದಿನಗಳಿಂದ ಶೋಧ ಕಾರ್ಯ ನಡೆಸಲಾಗುತ್ತಿತ್ತು. ಈ ಅವಧಿಯಲ್ಲಿ ಸಂಶಯಾಸ್ಪದ ಒಟ್ಟು 12 ಜನರ ವಿರುದ್ಧ ಸಿಆರ್‌ಪಿಸಿ 110(ಇ) ಮತ್ತು (ಜಿ), 107 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೈಕಿ ಕೆಲವರು ರೌಡಿ ಶೀಟರ್ ಪಟ್ಟಿಯಲ್ಲಿ ಇದ್ದಾರೆ ಎಂದು ತಿಳಿಸಿದರು.

ಸಂಶಯಾಸ್ಪದ ವ್ಯಕ್ತಿಗಳ ಮನೆಗಳ ಶೋಧ ಕಾರ್ಯಾಚರಣೆಯಲ್ಲಿ ಚಾಕು, ಚೂರಿ, ತಲ್ವಾರ್ ಮತ್ತು ಜಿಂಕೆ ಕೊಂಬು ಪತ್ತೆಯಾಗಿದೆ. ವಶಕ್ಕೆ ಪಡೆದ ಮಾರಕಾಸ್ತ್ರಗಳು ಜನರ ಜೀವ ಹಾನಿಗೆ ಬಳಸುವ ಉದ್ದೇಶವಿತ್ತೊ ಅಥವಾ ಬೇರೆ ಉದ್ದೇಶಕ್ಕೆ ಬಳಸುತ್ತಿದ್ದರೊ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅದೇ ರೀತಿ ಜಿಂಕೆ ಕೊಂಬನ್ನು ಸಹ ಮಾರಕ ಆಯುಧವಾಗಿ ಬಳಸಲು ಉದ್ದೇಶಿಸಿದ್ದರೆ ಅಥವಾ ಸಾಗಾಟ ಮಾಡುವ ಉದ್ದೇಶವಿತ್ತೊ ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಬಾರ್ ಮೇಲೆ ನಿಗಾ

ಅವಳಿ ನಗರದ ಬಾರ್ ಮತ್ತು ರೆಸ್ಟೋರೆಂಟ್‌ಗಳ ಬಳಿ ಮತ್ತು ರಾತ್ರಿ 9 ರಿಂದ 11 ಗಂಟೆ ವೇಳೆಗೆ ಇಂಥ ಅಹಿತಕರ ಘಟನೆಗಳು ನಡೆಯುತ್ತಿವೆ. ಹೀಗಾಗಿ ಈ ಅವಧಿಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗುವುದು. ಕೆಲ ಮಾಂಸಾಹಾರಿ ಹೋಟೆಲ್, ಧಾಬಾಗಳಲ್ಲಿಯೂ ಅಕ್ರಮ ಮದ್ಯ ಸೇವನೆ ಮಾಡಿ, ಅಪರಾಧ ಕೃತ್ಯ ನಡೆಸಿದ್ದು ಕಂಡು ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

6 ಜನರ ಗಡಿಪಾರ

ಅವಳಿ ನಗರದಲ್ಲಿ ಅಪರಾಧ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಟ್ಟು 6 ಜನರನ್ನು ಗಡಿಪಾರು ಮಾಡಲು ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ತಿಳಿಸಿದರು.

ಜನತೆ ಮಾರಕಾಸ್ತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಮತ್ತು ಇಟ್ಟುಕೊಳ್ಳುವುದು ಅಪರಾಧ. ಮಾರಕಾಸ್ತ್ರಗಳನ್ನು ಹೊಂದಿರುವುದು ಮತ್ತು ಬಳಕೆ ಮಾಡಿದ ಅಪರಾಧ ಪ್ರಕರಣ ಸಾಬೀತಾದರೆ 3 ರಿಂದ 14 ವರ್ಷದವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಯಾರಾದರೂ ಮಾರಕಾಸ್ತ್ರಗಳನ್ನು ಹೊಂದಿದ್ದರೆ ಸಾರ್ವಜನಿಕರು ಅಂಥವರ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಬೇಕು.

-ಶಿವಪ್ರಕಾಶ್ ದೇವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!