ಹಗರಿಬೊಮ್ಮನಹಳ್ಳಿ: ಭೂಮಿ ಹದ್ದು ಬಸ್ತು ಮಾಡಿಕೊಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಹಗರಿಬೊಮ್ಮನಹಳ್ಳಿ ಭೂಮಾಪನ ಇಲಾಖೆಯ ಸರ್ವೆಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ತಾಲೂಕಿನ ನಂದಿಬೇವೂರು ತಾಂಡಾದಲ್ಲಿ ನಡೆದಿದೆ.
ಹಗರಿಬೊಮ್ಮನಹಳ್ಳಿ ಭೂಮಾಪನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರ್ವೆಯರ್ ಕೊಟ್ರೇಶ್ ನಾಯ್ಕ ಲೋಕಾಯುಕ್ತರ ಬಲೆಗೆ ಬಿದ್ದ ಆರೋಪಿ.
ತಾಲೂಕಿನ ವರದಾಪುರ ಗ್ರಾಮದ ಎಚ್. ದೇವೇಂದ್ರಪ್ಪ ಅವರು ತಮ್ಮ ಹೊಲದ ಹದ್ದು ಬಸ್ತಿಗಾಗಿ ಭೂಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಪರಿಶೀಲನೆಗಾಗಿ ಸರ್ವೆಯರ್ ಕೊಟ್ರೇಶ್ ನಾಯ್ಕ ಅವರನ್ನು ನಿಯೋಜಿಸಲಾಗಿತ್ತು.
ಆದರೆ, 2024ರಿಂದ ವಿವಿಧ ಕಾರಣಗಳನ್ನು ಹೇಳುತ್ತಾ ಹದ್ದು ಬಸ್ತು ಕಾರ್ಯವನ್ನು ವಿಳಂಬಗೊಳಿಸಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮೊದಲ ಹಂತದಲ್ಲಿ ₹10 ಸಾವಿರ ಹಣ ಪಡೆದಿದ್ದಲ್ಲದೆ, ಬಳಿಕ ಮತ್ತಷ್ಟು ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಹರಪನಹಳ್ಳಿ ತಾಲೂಕಿನ ನಂದಿಬೇವೂರು ತಾಂಡಾದಲ್ಲಿ ಲಂಚ ಸ್ವೀಕರಿಸುವ ವೇಳೆ ಕೊಟ್ರೇಶ್ ನಾಯ್ಕ ಅವರನ್ನು ಬಲೆಗೆ ಬೀಳಸಲಾಗಿದೆ. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಎಸ್. ಛಲವಾದಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಾಜೇಶ್ ಲಮಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅಧಿಕಾರಿಗಳಾದ ಅಮರೇಶ್ ಹುಬ್ಬಳ್ಳಿ ಸೇರಿದಂತೆ ಸಿಬ್ಬಂದಿಗಳಾದ ಸುರೇಶ್, ಶ್ರೀನಿವಾಸ್, ರೇಣುಕಪ್ಪ, ಕುಮಾರ ನಾಯ್ಕ, ಚೆನ್ನಬಸಪ್ಪ ಹಾಗೂ ಕೃಷ್ಣ ತಂಡದಲ್ಲಿ ಭಾಗವಹಿಸಿದ್ದರು.



