1767 ನೋಟಾ ಮತಗಳು ಮಾಡಿದ ಯಡವಟ್ಟು…..
ಶಾಸಕ ಎಚ್ ಕೆ ಪಾಟೀಲ್ ಹ್ಯಾಟ್ರಿಕ್ ಗೆಲುವು…..
ವಿಜಯಸಾಕ್ಷಿ ಸುದ್ದಿ, ಗದಗ
ಗದಗ ಜಿಲ್ಲೆಯಲ್ಲಿ ಎರಡು ಸ್ಥಾನದಲ್ಲಿ ಬಿಜೆಪಿ, ಎರಡು ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಗದಗ ಹಾಗೂ ರೋಣದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ.

ಗದಗನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್ ಕೆ ಪಾಟೀಲ್ ಅವರು ಬಿಜೆಪಿಯ ಅನಿಲ ಮೆಣಸಿನಕಾಯಿ ಅವರನ್ನು 15130 ಮತಗಳ ಅಂತರದಿಂದ ಸೋಲಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

ಗದಗ ವಿಧಾನಸಭಾ ಕ್ಷೇತ್ರದ 16 ಸುತ್ತುಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಒಂಬತ್ತನೇ ಸುತ್ತಿನಲ್ಲಿ ಅನಿಲ ಮೆಣಸಿನಕಾಯಿ 493 ಮತಗಳ ಮುನ್ನಡೆ ಸಾಧಿಸಿದ್ದರು. ಮುಂದಿನ ಸುತ್ತುಗಳಲ್ಲಿ ಕಾಂಗ್ರೆಸ್ ತನ್ನ ಮುನ್ನಡೆ ಬಿಟ್ಟು ಕೊಡಲಿಲ್ಲ.

ರೋಣದಲ್ಲೂ ಕೂಡ ಮತ ಎಣಿಕೆಯ ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಜಿ ಎಸ್ ಪಾಟೀಲ್, ಕೊನೆಯವರೆಗೂ ಮುನ್ನಡೆ ಬಿಟ್ಟು ಕೊಡದೆ ಭರ್ಜರಿ ಗೆಲುವಿನ ಕೇಕೆ ಹಾಕಿದರು.

ಕಾಂಗ್ರೆಸ್‌ನ ಜಿ ಎಸ್ ಪಾಟೀಲ್ 94865 ಮತಗಳನ್ನು ಪಡೆದು ಬಿಜೆಪಿಯ ಕಳಕಪ್ಪ ಬಂಡಿ ಅವರನ್ನು 24688 ಮತಗಳ ಅಂತರದಿಂದ ಪರಾಭವಗೊಳಿಸಿದರು.
ಆನೇಕಲ್ ದೊಡ್ಡಯ್ಯ 8839 ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಚಂದ್ರು ಲಮಾಣಿ ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು 27963 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ 45637 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡರು.

ಕಾಂಗ್ರೆಸ್ ಅಭ್ಯರ್ಥಿ ಸುಜಾತ ದೊಡ್ಡಮನಿ 34550 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ನರಗುಂದ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ಆರಂಭದಲ್ಲಿ ಸ್ವಲ್ಪವೇ ಮತಗಳ ಅಂತರ ಕಾಯ್ದುಕೊಂಡು ಭಾರಿ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಪಕ್ಷ ಕೊನೆಗಳಿಗೆಯಲ್ಲಿ ಕೇವಲ 1791 ಮತಗಳಿಂದ ತನ್ನ ಸೋಲು ಒಪ್ಪಿಕೊಂಡಿತು.


ಬಿಜೆಪಿಯ ಸಿ ಸಿ ಪಾಟೀಲ್ 72835 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಬಿ ಆರ್ ಯಾವಗಲ್ ಅವರು 71044 ಮತಗಳನ್ನು ಪಡೆದಿದ್ದಾರೆ.
ಇಲ್ಲಿ ಬರೋಬ್ಬರಿ ಇವಿಎಮ್ ಮಷೀನ್ ಮೂಲಕ 1759 ಮತಗಳನ್ನು, 8 ಮತಗಳನ್ನು ಪೋಸ್ಟಲ್ ಮೂಲಕ ಒಟ್ಟು 1767 ನೋಟಾಕ್ಕೆ ಚಲಾಯಿಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆಯೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.

ಪರಸ್ಪರ ಗುಲಾಲ್ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.