ಗುತ್ತಿಗೆದಾರನಿಂದ ಒಂದೂವರೆ ಲಕ್ಷ ಹಣ ಪಡೆದಿದ್ದ…….
ವಿಜಯಸಾಕ್ಷಿ ಸುದ್ದಿ, ಗದಗ
ರಸ್ತೆ ಕಾಮಗಾರಿ ಬಿಲ್ ಪಾಸ್ ಮಾಡಲು ಲಂಚ ಪಡೆದಿದ್ದ, ನಗರಸಭೆ ಸಹಾಯಕ ಅಭಿಯಂತರ ಒಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಗರಸಭೆಯಲ್ಲಿ ನಡೆದಿದೆ.
ಗದಗ-ಬೆಟಗೇರಿ ನಗರಸಭೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುವ ಕಾಟೇವಾಲ ಎಂಬುವವರೇ ಲೋಕಾಯುಕ್ತರ ಬಲೆಗೆ ಬಿದ್ದವರು.
ಗುತ್ತಿಗೆದಾರ ಅಬ್ದುಲ್ ಮನಿಯಾರ್ ಎಂಬುವರ ಒಂಬತ್ತು ಲಕ್ಷ ರೂ ಮೊತ್ತದ ಒಂದು, ಐದು ಲಕ್ಷ ರೂ ಕಾಮಗಾರಿಯ ಎರಡು ಬಿಲ್ ಪಾಸ್ ಮಾಡಲು ಒಂದೂವರೆ ಲಕ್ಷ ಹಣ ಕೇಳಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತರ ತಂಡ ದಾಳಿ ಮಾಡಿ ಹಣ ಸಮೇತ ಕಾಟೇವಾಲ ಅವರನ್ನು ವಶಕ್ಕೆ ಪಡೆದಿದ್ದಾರೆ.

ಲಂಚ ಪಡೆದ ಇಂಜಿನಿಯರ್ ಕಾಟೇವಾಲ ಅವರು, ಹಣವನ್ನು ಬೈಕಿನಲ್ಲಿ ಇಟ್ಟಿದ್ದರು. ನಂತರ ಲೋಕಾಯುಕ್ತರಿಗೆ ಹಣ ಹಸ್ತಾಂತರ ಮಾಡಿದ್ದಾರೆ.
ಬಿಲ್ ಪಾಸ್ ಮಾಡಲು ಒಂದೂವರೆ ಲಕ್ಷ ಹಣ ಕೇವಲ ಕಾಟೇವಾಲ ಇಂಜಿನಿಯರ್ ಮಾತ್ರ ಕೇಳಿದ್ರಾ ಅಥವಾ ಬೇರೆ ಯಾರಾದರೂ ಇದರಲ್ಲಿ ಇದ್ದರಾ ಎಂಬುದು ಲೋಕಾಯುಕ್ತರ ತನಿಖೆಯಿಂದ ಹೊರಬಿಳಲಿದೆ.
ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ್, ಅಜೀಜ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಸಿಬ್ಬಂದಿಗಳಾದ ಎಸ್ ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್, ಮುತ್ತುರೆಡ್ಡಿ ಬಾರಡ್ಡಿ, ಗುಬ್ಬಿ, ಅಯ್ಯನಗೌಡರ, ವಿರೂಪಾಕ್ಷ ಅರಿಷಿಣದ ಹಾಗೂ
ವಾಹನ ಚಾಲಕರಾದ ನೈನಾಪೂರ ಹಾಗೂ ಹೆಬ್ಬಳ್ಳಿ ಈ ಕಾರ್ಯಾಚರಣೆಯಲ್ಲಿ ಇದ್ದರು.