ಗದಗ: ಬಡವರ ಹೊಟ್ಟೆ ತುಂಬಿಸಬೇಕಿದ್ದ ಸರ್ಕಾರದ ಪಡಿತರ ಅಕ್ಕಿಯನ್ನು ಕಾಳಸಂತೆಗೆ ಸಾಗಿಸಲು ಯತ್ನಿಸಿದ ಜಾಲವನ್ನು ರೋಣ ಆಹಾರ ಇಲಾಖೆಯ ಅಧಿಕಾರಿಗಳು ಭೇದಿಸಿದ್ದು, 69 ಚೀಲ ಪಿಡಿಎಸ್ ಅಕ್ಕಿಯೊಂದಿಗೆ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಸಾಗಣೆಯ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದೆ.
ಆಹಾರ ಇಲಾಖೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ರೋಣ–ನರಗುಂದ ರಸ್ತೆಯ ಐಬಿ ಸಮೀಪ ಬುಧವಾರ ತಡರಾತ್ರಿ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಟಾಟಾ ಇಂಟ್ರಾ ವಾಹನವನ್ನು ತಡೆದು ಪರಿಶೀಲಿಸಿದಾಗ, ಸರ್ಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂತು.
ತಪಾಸಣೆಯಲ್ಲಿ ವಾಹನದಲ್ಲಿ 69 ಚೀಲಗಳಲ್ಲಿ 34 ಕ್ವಿಂಟಲ್ 40 ಕೆ.ಜಿ. ಅಕ್ಕಿ ಪತ್ತೆಯಾಗಿದ್ದು, ಅಧಿಕಾರಿಗಳು ತಕ್ಷಣವೇ ಅಕ್ಕಿ ಹಾಗೂ ವಾಹನವನ್ನು ವಶಕ್ಕೆ ಪಡೆದರು. ವಶಪಡಿಸಿಕೊಂಡ ಅಕ್ಕಿಯ ಮೌಲ್ಯ ₹77,400 ಹಾಗೂ ವಾಹನದ ಮೌಲ್ಯ ₹2.50 ಲಕ್ಷ ಸೇರಿ ಒಟ್ಟು ₹3.27 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣದಲ್ಲಿ ಗದಗ ನಗರದ ಗಣೇಶನಗರ ನಿವಾಸಿ ರಮಜಾನಸಾಬ್ ಹಸನಸಾಬ್ ಸೂರಣಗಿ (32) ಎಂಬಾತನನ್ನು ಆರೋಪಿಯಾಗಿ ಗುರುತಿಸಲಾಗಿದೆ. ಆತ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಪಿಡಿಎಸ್ ಅಕ್ಕಿಯನ್ನು ಕಾಳಸಂತೆಗೆ ಸಾಗಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆಹಾರ ನಿರೀಕ್ಷಕಿ ಸುವರ್ಣಾ ಜಮ್ಮನಕಟ್ಟಿ ನೀಡಿದ ದೂರಿನ ಮೇರೆಗೆ ರೋಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 107/2026 ದಾಖಲಾಗಿದ್ದು, ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಪಿಡಿಎಸ್ ನಿಯಂತ್ರಣ ಆದೇಶದಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.



