ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಈಗ ಹೊಸ ಕಂಡಿಷನ್‌ಗಳನ್ನು ಹೇರುತ್ತಿರುವುದೇಕೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಕಾ ಪಾಟೀಲ್ ನಿಂಗೂ ಫ್ರೀ, ಜಮೀರ್ ಅಹ್ಮದ್, ಮಹದೇವಪ್ಪ ನಿಂಗೂ ಫ್ರೀ ಎಂದು ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯನವರು ತಿಳಿಸಿದ್ದರು. ಆದ್ರೆ ಈಗ ಹೊಸ-ಹೊಸ ಕಂಡಿಷನ್ ಗಳನ್ನು ಹೇರುತ್ತಿರುವುದು ಏಕೆ ಎಂದು ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳಿಗಾಗಿ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರದ ಖಜಾನೆ ಸ್ಥಿತಿಯನ್ನು ಜನರು ಈಗಾಗಲೇ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಅಲ್ಲದೆ, ಹೊಸ ಬಿಪಿಎಲ್ ಕಾರ್ಡ್ ನೀಡುವುದನ್ನೂ ನಿಲ್ಲಿಸಿರುವುದರಿಂದ ಅರ್ಹ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸಂಬಂಧ ಇಲ್ಲ ಎಂದು ಹೇಳಿದರೆ ನಾವು ಪ್ರಶ್ನೆ ಮಾಡುವುದಿಲ್ಲ ಎಂದು ಅವರು ಸವಾಲು ಹಾಕಿದರು.



