ವಿಜಯಸಾಕ್ಷಿ ಸುದ್ದಿ, ರೋಣ
ಚುನಾವಣಾಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್ ಹಾಕಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ರೋಣ ತಾಲೂಕಿನ ಮೆಣಸಗಿ ಗ್ರಾಮದ ಕೇದಾರಗೌಡ ಎಂಬುವರು ಏ.8ರಂದು ಮುಂಜಾನೆ 10 ಗಂಟೆಯ ಸಮಯಕ್ಕೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಲವೊಂದು ಗ್ಯಾರಂಟಿ ಭಾಗ್ಯಗಳನ್ನು ಘೋಷಿಸಿದೆ. ಆದರೆ, ಘೋಷಣೆ ಮಾಡದ ಗ್ಯಾರಂಟಿಗಳು ಎಂದು ಪೋಸ್ಟ್ ಮಾಡಿದ್ದರು.
ನರಗುಂದ ಮತಕ್ಷೇತ್ರದ ಹೊಳೆಆಲೂರು ಸರ್ಕಲ್ ಹಾಗೂ ಗ್ರಾಮೀಣ ವಲಯದ ಫ್ಲೈಯಿಂಗ್ ಸ್ಕ್ವಾಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಹಶಮ್‌ಸಾಹೇಬ ಮಹಮ್ಮದ್‌ಗೌಸ್ ಖುದಾವಂದ್ ಇವರು ಏ.13ರಂದು ರೋಣದ ಕಾರ್ಯನಿರ್ವಾಹಕ ಅಭಿಯಂತರು ನೀಡಿದ ಮಾಹಿತಿಯ ಮೇರೆಗೆ ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.
ಕಲಂ:125 ಆರ್.ಪಿ ಕಾಯ್ದೆ-1951 ಮತ್ತು ಐಪಿಸಿ ಕಲಂ:171(ಬಿ) ಅಡಿಯಲ್ಲಿ ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.